ದುಬೈ । ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರಫ್ ನಿಧನ

0
515

ಸನ್ಮಾರ್ಗ ವಾರ್ತೆ

ದುಬೈ: ದೀರ್ಘಾವಧಿಯ ಗಂಭೀರ ಅನಾರೋಗ್ಯದ ನಂತರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಪರ್ವೇಝ್ ಮುಷರಫ್ ಅವರು ಯುಎಇಯ ದುಬೈನಲ್ಲಿರುವ ಅಮೇರಿಕನ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಅವರ ಮೃತದೇಹವನ್ನು ಪಾಕಿಸ್ತಾನಕ್ಕೆ ತರುವ ಬಗ್ಗೆ ಯಾವುದೇ ಮಾಹಿತಿ ಇನ್ನೂ ಕುಟುಂಬ ಮತ್ತು ಪಾಕ್ ಸರ್ಕಾರ ನೀಡಿಲ್ಲ ಎಂದು ವರದಿಯಾಗಿದೆ.

ಅಮಿಲೋಯ್ಡೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಮುಷರಫ್, ದೀರ್ಘಾವಧಿಯ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಮಿಲೋಯ್ಡೋಸಿಸ್ ದೇಹದಾದ್ಯಂತ ಅಂಗಗಳು ಮತ್ತು ಅಂಗಾಂಶಗಳಲ್ಲಿ ಅಮಿಲಾಯ್ಡ್ ಎಂಬ ಅಸಹಜ ಪ್ರೋಟೀನ್‌ನ ರಚನೆಯಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ.

2007ರಲ್ಲಿ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ ಅವರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದ ಮುಷರಫ್, ಕಳೆದ ಎಂಟು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದರು. ಉಳಿದ ಜೀವನವನ್ನ ತನ್ನ ತಾಯ್ನಾಡಿನಲ್ಲಿ ಕಳೆಯುವ ಬಯಕೆಯನ್ನು ಅವರು ಮೊದಲೇ ವ್ಯಕ್ತಪಡಿಸಿದ್ದರು ಮತ್ತು ಸಾಧ್ಯವಾದಷ್ಟು ಬೇಗ ಪಾಕಿಸ್ತಾನಕ್ಕೆ ಮರಳಲು ಬಯಸಿದ್ದರು ಎಂದು ಕುಟುಂಬ ತಿಳಿಸಿದ್ದರು.

ಮುಷರಫ್‌ ಅವರು 1999ರಿಂದ 2008ರ ವರೆಗೂ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. 2007ರಲ್ಲಿ ಸಂವಿಧಾನವನ್ನು ತೆಗೆದು ಹಾಕುವ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಆ ವಿಚಾರದಲ್ಲಿ ಅವರು ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿದ್ದರು. 2014ರಲ್ಲಿ ಅವರ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿತ್ತು. 2019 ಡಿಸೆಂಬರ್ 17, ರಂದು ವಿಶೇಷ ನ್ಯಾಯಾಲಯವು ದೇಶದ್ರೋಹದ ಪ್ರಕರಣದಲ್ಲಿ ಮುಷರಫ್ ಅವರಿಗೆ ಮರಣದಂಡನೆ ವಿಧಿಸಿತು. ಆದರೆ, ಆರೋಗ್ಯ ಕಾರಣಗಳಿಗಾಗಿ 2016ರಲ್ಲಿ ಚಿಕಿತ್ಸೆಗೆಂದು ದುಬೈಗೆ ಹಾರಿದ್ದ ಅವರು ದೇಶಕ್ಕೆ ಮರಳಿರಲಿಲ್ಲ.

ಮಾಜಿ ಅಧ್ಯಕ್ಷರು 1999 ರಲ್ಲಿ ಯಶಸ್ವಿ ರಕ್ತರಹಿತ ಮಿಲಿಟರಿ ದಂಗೆಯ ನಂತರ ಪಾಕಿಸ್ತಾನದ ಹತ್ತನೇ ಅಧ್ಯಕ್ಷರಾಗಿದ್ದರು. ಅವರು 1998 ರಿಂದ 2001 ರವರೆಗೆ ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ 10ನೇ ಅಧ್ಯಕ್ಷರಾಗಿ ಮತ್ತು 1998ರಿಂದ 2007ರವರೆಗೆ 7ನೇ ಉನ್ನತ ಜನರಲ್ ಆಗಿದ್ದರು.