ಆಯಿಷತುಲ್ ಅಫೀಫಾ
ಮಾರ್ಚ್ ನಿಂದ ಜೂನ್ ವರೆಗೆ ಶಾಲಾ ಪರೀಕ್ಷೆಗಳು ಮತ್ತು ಫಲಿತಾಂಶದ ಕಾಲ. ಈ ಸಮಯದಲ್ಲಿ ಮನೆ ಹಿರಿಯರಿಂದ, ನೆರೆಕರೆಯವರಿಂದ ಪರೀಕ್ಷೆಯ ಕುರಿತು ಬುದ್ದಿ ಮಾತುಗಳು ಸಲಹೆ ಸೂಚನೆಗಳು ದೊರೆಯುವ ಕಾಲ. ಪರೀಕ್ಷಾ ಭೂತವನ್ನು ಹೊಡೆದೋಡಿಸಲು ಏನು ಮಾಡಬೇಕೆಂದು ತಿಳಿಹೇಳುವಲ್ಲಿ ಮಾಧ್ಯಮಗಳು ಸಹ ಹಿಂದೆ ಬಿದ್ದಿಲ್ಲ. ಪರೀಕ್ಷೆಯಲ್ಲಿ ಮೊದಲಿಗನಾಗಲು ಅನುಸರಿಸಬೇಕಾದ ಜೋತಿಷ್ಯ ಶಾಸ್ತ್ರದ ಕೆಲವು ಸಲಹೆಗಳು ಎಂದು ಒಂದು ದಿನಪತ್ರಿಕೆಯಲ್ಲಿ ಕೆಲವು ದಿನಗಳ ಹಿಂದೆ ಓದಿದ ನೆನಪು. ಅಲ್ಲ ಎಲ್ಲ ವಿದ್ಯಾರ್ಥಿಗಳು ಅದನ್ನು ಅನುಸರಿಸಿದರೆ ಪ್ರಥಮವೆಂದು ಕರೆಸಿಕೊಳ್ಳುವವರು ಯಾರು? ಎಲ್ಲರೂ ಪ್ರಥಮವೆಂದಾದರೆ ದ್ವಿತೀಯ, ತೃತೀಯ ನಂತರದ ಸ್ಥಾನಗಳನ್ನು ಪಡೆಯುವಾವರಾರು? ಈ ಶ್ರೇಣಿಗಳಿಲ್ಲವೆಂದಾದರೆ ಪ್ರಥಮಕ್ಕಿರುವ ಬೆಲೆಯೇನು? ಪ್ರಥಮವೆನ್ನುವುದು ಮಾತ್ರ ಮಾನ್ಯ, ನಂತರದ ಶ್ರೇಣಿಗಳಿಗೆ ಬೆಲೆಯಿಲ್ಲವೆಂಬ ಮನೋಭಾವವನ್ನು ನಮ್ಮ ಮಕ್ಕಳಲ್ಲಿ ಬೆಳೆಸುವುದಾದರೂ ಯಾಕೆ? ನಾವು ಪಡೆಯುವ ಅಂಕಗಳು ನಮ್ಮ ಜೀವನದ ಯಶಸ್ಸನ್ನು ಅಥವ ಉದ್ಯೋಗವನ್ನು ತೀರ್ಮಾನಿಸುವ ಮಾನದಂಡಗಳಲ್ಲ. ಹಾಗೆ ಹಣ ಸಂಪಾದನೆಯಲ್ಲಿ ಮಾತ್ರವಲ್ಲ ಜೀವನದ ಯಶಸ್ಸು ಅಡಕವಾಗಿರುವುದು. ಶೈಕ್ಷಣಿಕವಾಗಿ ಹಿಂದುಳಿದವರು ಅವರ ಕನಸಿನ ಬೆನ್ನಟ್ಟಿ ಯಶಸ್ಸನ್ನು ಸಾಧಿಸಿರುವ ಉದಾಹರಣೆಗಳು ಬೇಕಾದಷ್ಟಿವೆ. ಒಬ್ಬ ವಿದ್ಯಾರ್ಥಿ ಕಡಿಮೆ ಅಂಕ ಪಡೆದನೆಂದರೆ ಅಥವಾ ಫೇಲಾಗಿದ್ದರೆ ಅದು ಕೇವಲ ಅವನ ಶೈಕ್ಷಣಿಕ ಹಿನ್ನಡೆಯೇ ಹೊರತು ಜೀವನದ ಸೋಲಲ್ಲ. ಈ ಸತ್ಯವನ್ನು ನಮ್ಮ ವಿದ್ಯಾರ್ಥಿಗಳಿಗೆ ಮನಗಾಣಿಸಬೇಕಾಗಿದೆ. ಇಂದು ಸಣ್ಣ ಮಟ್ಟಿನ ನಿರಾಸೆಗೂ ಮಕ್ಕಳು ಆತ್ಮಹತ್ಯೆಯ ದಾರಿಯನ್ನು ಆರಿಸುತ್ತಿದ್ದಾರೆ. ಫಲಿತಾಂಶದ ಸಮಯದಲ್ಲಂತು ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತದೆ. ದಿನಪತ್ರಿಕೆಗಳಲ್ಲಿ ಸಾಮಾನ್ಯವೆನ್ನುವಂತೆ ಕಾಣಸಿಗುತ್ತದೆ. 2018 ರಲ್ಲಿ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆಂದು ದಾಖಲೆಗಳು ತಿಳಿಸುತ್ತದೆ. ರಾಂಕ್ ತೆಗೆದ ವಿದ್ಯಾರ್ಥಿಗಿಂತಲೂ ಇಂತಹ ಮಕ್ಕಳು ಮನಸ್ಸಿನ ಒಂದು ಕೋನದಲ್ಲಿ ಜಾಗಹಿಡಿದು ಆಗಾಗ ನೆನಪಿಗೆ ಬರುತ್ತಿರುತ್ತಾರೆ.
ಮಕ್ಕಳಷ್ಟೇ ಅಲ್ಲ ವಯಸ್ಕರು ಸಹ ಬಲುಬೇಗ ಬದುಕನ್ನು ಕೊನೆಗೊಳಿಸುವ ನಿರ್ದಾರಕ್ಕೆ ಬರುತ್ತಿದ್ದಾರೆ. ವಿಶ್ವದಾದ್ಯಂತ ಆತ್ಮಹತ್ಯೆ ಒಂದು ಪಿಡುಗಾಗಿ ಮಾರ್ಪಟ್ಟಿದೆ. ಯುದ್ಧ ಮತ್ತು ಕೊಲೆಯನ್ನು ಒಟ್ಟು ಸೇರಿಸಿ ಸಂಭವಿಸುವ ಸಾವಿಗಿಂತ ಹೆಚ್ಚು ಸಾವು ಆತ್ಮಹತ್ಯೆಯಿಂದ ಸಂಭವಿಸುತ್ತದೆ. ಚೀನಾ ಬಿಟ್ಟರೆ ಅತೀ ಹೆಚ್ಚು ಆತ್ಮಹತ್ಯೆ ಸಂಭವಿಸುವ ದೇಶ ಭಾರತ. ರೈತರ ಆತ್ಮಹತ್ಯೆಗಳು ಸರ್ವಸಾಮಾನ್ಯವಾಗಿದೆ. ಆದರೆ ಅದರ ಮೂರು ಪಟ್ಟು ಸಂಖ್ಯೆಯಲ್ಲಿ ನಿರುದ್ಯೋಗಿಗಳು, ವೃತ್ತಿಪರ ನೌಕರಿಯಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಒಂದು ಅಂಕಿ ಅಂಶದ ಪ್ರಕಾರ, ಭಾರತದಲ್ಲಿ ಪ್ರತಿದಿನ 95-100 ಜನ; ಪ್ರತಿ ಲಕ್ಷ ಜನಸಂಖ್ಯೆಗೆ 11.5% ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇವರಲ್ಲಿ 40% ಹದಿಹರೆಯದವರು. ಅದರಲ್ಲಿ 45% 15ರಿಂದ 29 ವಯೋಮಾನದವರು. 12-18 ವಯೋಮಾನದವರ ಆತ್ಮಹತ್ಯೆಯಲ್ಲಿ 99% ಕಾರಣ ಶೈಕ್ಷಣಿಕ ಒತ್ತಡವಾಗಿದೆ.
ಮನೋರೋಗ ತಜ್ಞರ ಪ್ರಕಾರ ಮಕ್ಕಳ ಆತ್ಮಹತ್ಯೆಗೆ ಮೂರು ಮುಖ್ಯ ಕಾರಣಗಳು, ಒಂದನೆಯದಾಗಿ ಬಿಸಿಲಿಗೆ ಕಡಿಮೆ ಒಡ್ಡಿಕೊಳ್ಳುವುದು. ವೈಜ್ಞಾನಿಕವಾಗಿ ದೃಢಪಟ್ಟಿರುವಂತೆ ಬಿಸಿಲಿನಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ ಮೆದುಳು ಸಕ್ರಿಯವಾಗುತ್ತದೆ ಮತ್ತು ಅದು ಉಲ್ಲಾಸದ ಭಾವನೆ ಮೂಡಿಸುವ ಎಂಡಾರ್ಫಿನ್ ಹಾರ್ಮೋನುಗಳನ್ನು ಸ್ರವಿಸುತ್ತದೆ. ನಾಲ್ಕು ಗೋಡೆಗಳ ನಡುವೆ ಕೆಲಸ- ಓದು ಇರುವವರಲ್ಲಿ ಎಂಡಾರ್ಫಿನ್ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಅವರ ಜೀವನ ಶೈಲಿ ಅದಕ್ಕೆ ಕಾರಣವಾಗಿರುತ್ತದೆ. ವಸತಿ ಸಮುಚ್ಛಯಗಳಲ್ಲಿ ವಾಸಿಸುವ ಎಲ್ಲ ಆಟೋಟಗಳು ಮನೆಯೊಳಗೇ ಸೀಮಿತವಾಗಿರುವ ಇಂದಿನ ಮಕ್ಕಳು ಬಿಸಿಲಿಗೆ ತಮನ್ನು ಒಡ್ಡಿಕೊಳ್ಳುವುದು ತೀರಾ ಕಡಿಮೆಯೆನಿಸಿದೆ. ಹಾಗಾಗಿಯೇ ಇಂದಿನ ಮಕ್ಕಳು ಸಣ್ಣ ಬೈಗುಳಕ್ಕೂ ಅವಮಾನವೆನಿಸಿ, ಕೇಳಿದ್ದು ದೊರೆತಿಲ್ಲವೆನ್ನುವ ಸಣ್ಣ ನಿರಾಸೆಗೂ ಹತಾಶರಾಗಿ ಆತ್ಮಹತ್ಯಯ ದಾರಿಯನ್ನು ಆಯ್ದುಕೊಳ್ಳುವುದಾಗಿರಬಹುದು. ಹಾಗಂತ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಆತ್ಮಹತ್ಯೆ ತಪ್ಪಿಸಬಹುದೆಂದಲ್ಲ, ತಡೆಯಲಿಕ್ಕಿರುವ ಒಂದು ಪೂರಕ ಅಂಶ ಮಾತ್ರ.
ಎರಡನೆಯದಾಗಿ ಅನುಕರಣೆ ಮತ್ತು ಹೋಲಿಕೆ, ಎಲ್ಲ ಮಕ್ಕಳು ಎಲ್ಲ ವಿಷಯದಲ್ಲೂ ಮುಂದಿರುವುದಿಲ್ಲ. ಎಲ್ಲರೂ ಶೈಕ್ಷಣಿಕವಾಗಿ ಯಶಸ್ವಿಯಾಗುವುದಿಲ್ಲ. ಉಳಿದ ಮಕ್ಕಳಂತೆ ತನ್ನ ಮಕ್ಕಳು ಟಾಪರ್ ಆಗಿರಬೇಕೆಂದು ಯೋಚಿಸುವ ಪೋಷಕರೆ ಹೆಚ್ಚು. ಹೀಗಿರುತ್ತ ಅಂಕಗಳಿಕೆಯಲ್ಲಿ ಅಥವಾ ತನ್ನ ಪ್ರದರ್ಶನದಲ್ಲಿ ಕೊಂಚ ಹಿಂದೆ ಬಿದ್ದರೂ ಮಕ್ಕಳು ಹೋಲಿಕೆ ನಿಂದನೆ ಮಾತುಗಳು ಕೇಳುವಂತಾಗುತ್ತದೆ. ಮಕ್ಕಳ ಅರ್ಥಮಾಡುವ ಸಾಮರ್ಥ್ಯಕ್ಕಿಂತ ಅಂಕಪಟ್ಟಿ ನೋಡಿಯೇ ಬೌದ್ಧಿಕ ಮಟ್ಟ ಗುರುತಿಸಲಾಗುತ್ತದೆ. ಬಾಯಿಪಾಠ ಮಾಡಿಯಾದರೂ ಅಂಕಗಳಿಕೆಯೇ ಮುಖ್ಯವೆಂದು ಭೋದಿಸಲಾಗುತ್ತದೆ. ಹೋಲಿಕೆಗಳು ಮಕ್ಕಳೊಡನೆ ತರವಲ್ಲ, ಒಂದು ವಿಷ್ಯಕ್ಕೆ ಸಲ್ಲದ ಮಾತ್ರಕ್ಕೆ ಅವರು ನಿಷ್ಪ್ರಯೋಜಕರೆಂದಲ್ಲ. ಒಂದು ವಿಷಯ ತಿಳಿದಿರದಿದ್ದರೆ ಮತ್ತೊಂದರಲ್ಲಿ ನಮ್ಮ ಊಹೆಗೂ ಮೀರಿ ಯಶಸ್ಸನ್ನು ಸಾಧಿಸಬಹುದು. ಮಕ್ಕಳು ನಮ್ಮಿಂದ ನಿರೀಕ್ಷಿಸುವುದು ಕಾಳಜಿ ಭರಿತ ಮಾರ್ಗದರ್ಶನವನ್ನು, ಒಪ್ಪಿಕೊಳ್ಳುವಿಕೆಯನ್ನು. ಹೋಲಿಕೆಗಳು ಮಕ್ಕಳನ್ನು ಅಧೀರರನ್ನಾಗಿ ಮಾಡುತ್ತದೆ. ತಾನು ನಿಷ್ಪ್ರಯೋಜಕನೆನ್ನುವ ಭಾವನೆ ಮೂಡಿಸಿ ಉತ್ಸಾಹವನ್ನು ಕುಗ್ಗಿಸುತ್ತದೆ.
ಮೂರನೆಯದಾಗಿ ಪರೀಕ್ಷಾ ಫಲಿತಾಂಶದ ಒತ್ತಡ. ಒತ್ತಡ ಮನುಷ್ಯನ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಅದು ವ್ಯಕ್ತಿಯ ಜೈವಿಕ ವಯಸ್ಸನ್ನು ದೈಹಿಕ ವಯಸ್ಸಿಗಿಂತ ಮೂರರಿಂದ ಮೂವತ್ತು ಪಟ್ಟು ಹೆಚ್ಚುಮಾಡುತ್ತದೆ. ಹತ್ತು ವರ್ಷದ ಹುಡುಗ ನಿರಂತರ ಒತ್ತಡಕ್ಕೊಳಗಾದರೆ ಮೂವತ್ತು ವರ್ಷದವರಂತೆ ವರ್ತಿಸುತ್ತಾನೆ. ಆದರೆ ಅದು ಮಾಗುವಿಕೆಯಲ್ಲ ವಿಮರ್ಶೆ, ವಿಶ್ಲೇಷಣೆ ಕಲಿಸಲಾರದು, ಆತ್ಮಹತ್ಯೆಯಂತಹ ಅವಸರದ ತೀರ್ಮಾನಕ್ಕೆ ಕಾರಣವಾಗುತ್ತದೆ.
ಒತ್ತಡ ಯಾರನ್ನು ಬಿಟ್ಟಿಲ್ಲ, ಬರಹಗಾರರಲ್ಲಿ 72%, ರಾಜಕಾರಣಿಗಳು ಮತ್ತು ಕಲಾವಿದರು 42%, ಸಂಗೀತಗಾರರು, ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು 35% ಒತ್ತಡಕ್ಕೊಳಗಾಗುತ್ತಾರೆಂದರೆ ಸುತ್ತಲ ಪರಿಸರದ ಒತ್ತಡವೇ ಏರಿನಿಂತಿರುವ ಈ ಕಾಲದಲ್ಲಿ ಈಗ ತಾನೇ ಅರಳುವ ಮಕ್ಕಳ ಪಾಡೇನು? ನಮ್ಮ ಮನೆ ಮಗು ಪಾಸಾ ನಾಪಾಸಾ ಎಂಬ ಬಗ್ಗೆ ನಮಗಿಂತಲೂ ಪಕ್ಕದ ಮನೆಯವರಿಗೆ, ನೆಂಟರಿಷ್ಟರಿಗೆ ಕಕ್ಕುಲಾತಿ ಜಾಸ್ತಿ. ಇಂತಹ ಮನೋಭಾವದ ಹಿಂದೆ ಒಟ್ಟು ಸಮಾಜವಾಗಿ ನಮ್ಮೆಲ್ಲರ ಪಾಲಿದೆ. ಯಾಕೆಂದರೆ ನಾವಿಂದು ಮಕ್ಕಳನ್ನು ಜೂಜಿನ ಕುದುರೆಗಳಾಗಿ ಬೆಳೆಸುತ್ತಿದ್ದೇವೆ, ಗೆಲ್ಲುವುದನ್ನು ಮಾತ್ರ ಕಲಿಸುತ್ತಿದ್ದೇವೆ. ಆ ಕೋರ್ಸ್ ಈ ಕೋರ್ಸ್ ಎಂದು ಏನೇನಲ್ಲ ಕಲಿಸಿ ಸಕಲ ವಿಧ್ಯಾಪಾರಂಗತನಾಗಲೆಂದು ಬಯಸುತ್ತೇವೆ. ಗೆಲುವನ್ನು ಹೇಗೆ ಸಾಧಿಸಬೇಕು, ಎಲ್ಲರನ್ನು ಹಿಮ್ಮೆಟ್ಟಿ ಹೇಗೆ ಮುನ್ನುಗ್ಗಬೇಕೆಂಬುವುದನ್ನು ಕಲಿಸುವ ಪೋಷಕರಿದ್ದಾರೆ. ಆ ಕಾರಣಕ್ಕಾಗಿಯೇ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಪರ್ಸನಾಲಿಟಿ ಡೆವಲಪಮೆಂಟ್ ಕ್ಲಾಸ್ ಗಳಿವೆ. ಮಕ್ಕಳನ್ನು ಮಕ್ಕಳಾಗಿ ಪರಿಗಣಿಸಿದರೆ ಸಾಕು, ಅವರ ವ್ಯಕ್ತಿತ್ವವನ್ನು ಪ್ರಕೃತಿಯೇ ನಿರ್ಮಾಣಮಾಡುತ್ತದೆ.
ಒಂದು ಕ್ಷಣ ಯೋಚಿಸಿ ನಾವು ಮಕ್ಕಳಿಗೆ ಸೋಲನ್ನು ಪರಿಚಯಿಸಿದ್ದೇವೆಯೇ? ಸೋಲನ್ನು ಕಲಿಸಬೇಕಾಗಿಲ್ಲ, ಆದರೆ ಸೋಲನ್ನು ಹೇಗೆ ಎದುರಿಸುವುದೆಂಬುವುದನ್ನು ತಿಳಿ ಹೇಳಿದ್ದೇವೆಯೇ? ಉತ್ತರ ಇಲ್ಲ ಅಥವಾ ಹೌದು ಎಂಬ ಉತ್ತರ ಕೇವಲ ಕನಿಷ್ಟ ಪ್ರಮಾಣದಲ್ಲಿರಬಹುದು. ರೇಸಿನಲ್ಲಿ ಇಬ್ಬರಿದ್ದರೂ ಅಥವಾ ಲಕ್ಷಗಟ್ಟಲೆ ಜನರಿದ್ದರೂ ಛಲವಿದ್ದರೆ ಎಲ್ಲರೂ ಗುರಿಮುಟ್ಟುವರು. ಆದರೆ ಪ್ರಥಮವೆಂಬ ಪಟ್ಟ ಪಡೆಯುವವರು ಕೇವಲ ಒಬ್ಬರು. ಹೀಗಿರುವಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ಸೋತಿರುವವರೆ. ಗೆಲುವಿನ ಸವಿಯನ್ನು ಆಸ್ವಾಧಿಸಬೇಕಾದರೆ ಖಂಡಿತವಾಗಿಯೂ ಸೋಲಿನ ರುಚಿ ಅನುಭವಿಸಿರಬೇಕು. ಅಲ್ಲಾಹನ ಪ್ರವಾದಿಯೇ ತನ್ನ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಸೋಲನ್ನು ಅನುಭವಿಸದ ಜೀವಿಗಳಿಲ್ಲ ಎಂದು ಪ್ರವಾದಿಯವರು (ಸ) ಹೇಳಿದ್ದಾರೆ. ಹಾಗಾಗಿ ಸೋಲು ಸಹಜ, ಸೋಲನ್ನು ಸ್ವೀಕರಿಸುವ ಬಗೆಯನ್ನು ಹೇಳಿಕೊಡಬೇಕು. ಸೋಲನ್ನು ಮೆಟ್ಟಿನಿಲ್ಲುವ, ಬಿದ್ದರೂ ಕೊಡವಿ ಎದ್ದು ನಡೆಯುವ ಛಲವನ್ನು ಬೆಳೆಸಬೇಕು.
ಮಕ್ಕಳ ಒತ್ತಡ ಕಡಿಮೆಮಾಡುವುದೆಂದರೆ ಶೈಕ್ಷಣಿಕ ಒತ್ತಡ ಕಡಿಮೆ ಮಾಡುವುದು. ಶೈಕ್ಷಣಿಕ ಯಶಸ್ಸಿನ ಆಚೆಗೂ ಬದುಕು ವಿಶಾಲವಾಗಿದೆ ಮತ್ತು ಸುಂದರವಾಗಿದೆ ಎಂದು ಮಕ್ಕಳಿಗೆ ಪೋಷಕರೇ ಹೇಳಿಕೊಡಬೇಕು. ಮಕ್ಕಳ ಅತೀ ದೊಡ್ಡ ಭರವಸೆ ತಮ್ಮ ಹೆತ್ತವರು. ಹೆತ್ತವರು ಮಕ್ಕಳೊಡನೆ ಮುಕ್ತವಾಗಿ ಸಂವಹಿಸಬೇಕು. ಮಕ್ಕಳಿಗೆ ಕಡಿಮೆ ಹೇಳಿ. ಹೆಚ್ಚು ಕೇಳಿ. ಸರಿ ತಪ್ಪುಗಳ ಆದೇಶವನ್ನಲ್ಲ ಬದಲಾಗಿ ಮಾರ್ಗದರ್ಶನ ಮಾಡಿ. ಸರಿ ಯಾಕೆ, ತಪ್ಪು ಯಾಕೆ ಎಂಬುವುದನ್ನು ವಿವರಿಸಿ ಹೇಳಿ. ಅವರ ಮಾನಸಿಕ ತಲ್ಲಣಗಳಿಗೆ ಕಿವಿ ಕೊಡಿ. ಅವರು ಹೇಳುವ ವಿಚಾರಗಳು ನಮಗೆ ಕ್ಷುಲ್ಲಕವೆನಿಸಿದರೂ ಮಕ್ಕಳಿಗೆ ಮಹತ್ವದ್ದಾಗಿರಬಹುದು. ಪೂರ್ವಗ್ರಹವನ್ನಿಟ್ಟುಕೊಳ್ಳದೆ ಸಮಸ್ಯೆಗಳನ್ನು ಆಲಿಸಿರಿ, ಅರಿಯಿರಿ. ಸಫಲರೊ ವಿಫಲರೊ ಏನೇ ಆದರೂ ನಿಬಂಧನೆಗಳಿಲ್ಲದೆ ಅವರನ್ನು ಪ್ರೀತಿಸುತ್ತೇವೆಯೆಂಬುವುದನ್ನು ತೋರ್ಪಡಿಸಿರಿ.
ಅವಮಾನ, ಹಿನ್ನಡೆಗೆ ಆತ್ಮಹತ್ಯೆ ಪರಿಹಾರವಲ್ಲ, ಗೆಲುವೇ ಬದುಕಲ್ಲ ಸೋಲು ಸಾವಲ್ಲ. ಪ್ರತೀ ಕತ್ತಲೆಯ ನಂತರ ಒಂದು ಬೆಳಕು ಕಾಣುತ್ತೆ. ಬದುಕನ್ನು ತೀರ್ಮಾನಿಸುವಲ್ಲಿ ಮಕ್ಕಳು ಅವರನ್ನು ಬೆಳೆಸುವಲ್ಲಿ ನಾವು ಎಡವುತ್ತಿದ್ದೇವೆ. ಮಕ್ಕಳು ಅಲ್ಲಾಹನ ಅಪಾರ ಅನುಗ್ರಹಗಳಲ್ಲಿ ಒಂದು.












