ಸನ್ಮಾರ್ಗ ವಾರ್ತೆ
ಲಂಡನ್, ಮಾ. 2: ದಿಲ್ಲಿಯ ಗಲಭೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮತ್ತು ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಲಂಡನ್ ಹೈಕಮಿಶನ್ ಮುಂದೆ ಪ್ರತಿಭಟನೆ ನಡೆದಿದೆ. ಪ್ಯಾರಿಸ್, ಬರ್ಲಿನ್ ಸಹಿತ ಯುರೋಪಿನ 17 ನಗರಗಳಲ್ಲಿ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮಾನವಹಕ್ಕು ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದಾರೆ.
ದ ಇಂಡಿಯ ಸೊಸೈಟಿ ಎಟ್ ದ ಸ್ಕೂಲ್ ಆಫ್ ಒರಿಯಂಟಲ್ ಆಂಡ್ ಆಫ್ರಿಕನ್ ಸ್ಟಡೀಸ್(ಎಸ್ಒಎಎಸ್), ಸೌತ್ ಏಷ್ಯ ಸ್ಯೂಡೆಂಟ್ಸ್ ಎಗೈನ್ಸ್ಟ್ ಫ್ಯಾಶಿಸಂ ಆಂಡ್ ಸೌತ್ ಏಷ್ಯ ಸಾಲಿಡಾರಿಟಿ ಗ್ರೂಪ್ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ಲಂಡನ್ನಲ್ಲಿ ಪ್ರತಿಭಟನೆ ನಡೆಯಿತು. ದಿಲ್ಲಿ ಗಲಭೆಯಲ್ಲಿ ಬಲಿಯಾದವರೊಂದಿಗೆ ನಾವು ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳ ಸಹಿತ ಇಲ್ಲಿ ಪ್ರತಿಭಟನಾಕಾರರು ಸೇರಿದರು. ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಿ, ಗಲಭೆಗೆ ದಾರಿ ಮಾಡಿಕೊಟ್ಟ ಬಿಜೆಪಿ ನಾಯಕರನ್ನು ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಿಲ್ಲಿ ಗಲಭೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರ ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ಸಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಗತ್ತು ಈ ಅಕ್ರಮದ ವಿರುದ್ಧ ಪ್ರತಿಭಟಿಸದಿದ್ದರೆ ಭೀಕರ ಪ್ರತಿಹೊಡೆತಗಳಾಗಬಹುದು ಎಂದು ಪ್ರತಿಭಟನಾಕಾರು ಹೇಳಿದರು. ಗಲಭೆಯ ಬಲಿಪಶುಗಳ ಜೊತೆ ನಾವು ಇದ್ದೇವೆ. ಅವರಿಗೆ ಸುರಕ್ಷೆಗೆ ಕೆಲಸ ಮಾಡಿದ ಇತರ ಧಾರ್ಮಿಕ ಸಮುದಾಯಗಳನ್ನು ಪ್ರತಿಭಟನಾಕಾರರು ಪ್ರಶಂಸಿದರು.












