ಆಡಳಿತ ಪಕ್ಷದ ಮನೆಯ ಬೆಕ್ಕು ಮತ್ತು…

0
763

ಸನ್ಮಾರ್ಗ ಸಂಪಾದಕೀಯ

ಕಳೆದವಾರ ಚುನಾವಣಾ ಆಯೋಗವು ನೀಡಿರುವತೀರ್ಪನ್ನು ವಿಶ್ಲೇಷಕರುಗಂಭೀರವಾಗಿ ಪರಿಗಣಿಸುವ ಬದಲು ಜೋಕ್ ಆಗಿ ಸ್ವೀಕರಿಸಿದ್ದಾರೆ. ಅದಕ್ಕೆಕಾರಣವೂ ಇದೆ.

ವಿಜ್ಞಾನಿಗಳು ಹಾರಿಸಿದ ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮುಂದೆ ಬಂದರು. ಟಿ.ವಿ. ವಾಹಿನಿಗಳ ಮೂಲಕ ಸುಮಾರು 40 ನಿಮಿಷಗಳ ಕಾಲ ದೇಶವನ್ನುದ್ದೇಶಿಸಿ ಮಾತಾಡಿದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಸಿಪಿಐಎಂ ಪಕ್ಷವು ಚುನಾವಣಾ ಮಂಡಳಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಚುನಾವಣಾ ಮಂಡಳಿಯು ಪರಿಶೀಲನಾ ತಂಡವೊಂದನ್ನು ರಚಿಸಿತು. ಅದರ ಆಧಾರದಲ್ಲಿ ಚುನಾವಣಾ ಮಂಡಳಿ ನೀಡಿರುವ ತೀರ್ಪು ಎಷ್ಟು ತಮಾಷೆಯ ಸ್ವರೂಪದಲ್ಲಿ ಇದೆಯೆಂದರೆ, ಆ ತೀರ್ಪಿಗೆ ಕೆಜಿ ಕ್ಲಾಸಿನ ಮಗುವೂ ನಗಬಹುದು. ‘ದೂರದರ್ಶನವು ಆ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿಲ್ಲ,ANI ನಿಂದ ಪಡೆದುಕೊಂಡು ಅದು ಪ್ರಸಾರ ಮಾಡಿದೆ’ ಎಂಬ ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದಿದೆ. ನಿಜವಾಗಿ, ಈ ತೀರ್ಪಿನಲ್ಲಿಯೇ ಶರಣಾಗತಿಯ ಭಾವವಿದೆ. ನರೇಂದ್ರ ಮೋದಿಯವರನ್ನು ಎದುರು ಹಾಕಿಕೊಳ್ಳಲು ಬರುವುದಿಲ್ಲ ಎಂಬ ಸಂದೇಶ ಇದೆ. ಅಂದಹಾಗೆ,

ಒಂದು ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗವು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದೆಯೇ ಅನ್ನುವ ಪ್ರಶ್ನೆಗೆ ಇಲ್ಲ ಅನ್ನುವುದೇ ಉತ್ತರ. ದೂರದರ್ಶನದಲ್ಲಿ ನೇರವಾಗಿ ಪ್ರಸಾರವಾದರೆ ಮಾತ್ರವೇ ಈ ದೇಶದ ಮತದಾರರು ಅಂಥ ಭಾಷಣದಿಂದ ಪ್ರಭಾವಿತಗೊಳ್ಳುವುದೇ? ನೇರವಾಗಿ ಪ್ರಸಾರ ಮಾಡುವ ಖಾಸಗಿ ಟಿ.ವಿ. ಚಾನೆಲ್‍ಗಳಿಂದ ಸಿಗ್ನಲ್‍ಗಳನ್ನು ಪಡೆದುಕೊಂಡು ಹಾಗೆಯೇ ಪ್ರಸಾರ ಮಾಡುವುದರಿಂದ ಪ್ರಭಾವದಲ್ಲಿ ಕುಂಠಿತ ಆಗುವುದೇ? ಪ್ರಶ್ನೆ ಇರುವುದು- ದೂರದರ್ಶನ ಪ್ರಧಾನಿಯವರ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿದೆಯೋ ಇಲ್ಲವೋ ಎಂಬುದಲ್ಲ. ಚುನಾವಣಾ ನೀತಿ-ಸಂಹಿತೆ ಜಾರಿಯಾದ ಬಳಿಕ ಅಂಥದ್ದೊಂದು ಭಾಷಣ ಮತದಾರರ ಮೇಲೆ ಪ್ರಭಾವ ಬೀರಬಹುದೋ ಇಲ್ಲವೋ ಎಂಬುದು. ನೀತಿ ಸಂಹಿತೆಯನ್ನು ಅಕ್ಷರಾರ್ಥವಾಗಿ ಪರಿಗಣಿಸುವುದಕ್ಕೂ ಆಶಯಾರ್ಥವಾಗಿ ಪರಿಗಣಿಸುವುದಕ್ಕೂ ನಡುವೆ ವ್ಯತ್ಯಾಸ ಇದೆ. ಅಕ್ಷರಾರ್ಥವು ಅನುಕೂಲ ಸಿಂಧು ತೀರ್ಪನ್ನು ನೀಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಶಯಾರ್ಥ ಹಾಗಲ್ಲ. ನೀತಿ ಸಂಹಿತೆಯ ಆಶಯ ಏನಿದೆಯೋ ಅದನ್ನು ಅರಿತುಕೊಂಡು ತೀರ್ಪು ನೀಡಲು ಅದು ಒತ್ತಾಯಿಸುತ್ತದೆ. ಹಾಗಂತ, ಚುನಾವಣಾ ಆಯೋಗದ ದೌರ್ಬಲ್ಯವನ್ನು ಎತ್ತಿ ಹಿಡಿಯುವ ಪ್ರಕರಣ ಇದೊಂದೇ ಅಲ್ಲ.

ಪಾಕಿಸ್ತಾನದಲ್ಲಿ ಸೆರೆಯಾದ ಭಾರತದ ವಿಂಗ್‍ ಕಮಾಂಡರ್‍ ಅಭಿನಂದನ್ ವರ್ಧಮಾನ್‍ರನ್ನು ಬಿಜೆಪಿ ಚುನಾವಣೆಗೆ ಬಳಸಿಕೊಂಡಿತು. ಅವರ ಬೃಹತ್ ಹೋರ್ಡಿಂಗ್‍ಗಳನ್ನು ಪ್ರದರ್ಶಿಸಿತು. ನೀತಿ ಸಂಹಿತೆಯ ಆಶಯವನ್ನು ಪರಿಗಣಿಸುವುದಾದರೆ ಇದು ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗ ಈ ವಿಷಯದಲ್ಲಿ ಎಷ್ಟು ಮೃದು ನಿಲುವನ್ನು ತಾಳಿತೆಂದರೆ, ‘ನೀವು ಹಾಗೆ ಮಾಡಬೇಡಿ’ ಎಂಬ ವಿನಂತಿಯನ್ನು ಮಾಡಿಕೊಂಡು ಕೈ ತೊಳೆದುಕೊಂಡಿತು. ಚುನಾವಣಾ ಆಯೋಗ ದುರ್ಬಲಗೊಂಡಾಗ ಆಗುವ ಬೆಳವಣಿಗೆಗಳು ಇವು.

ಭಾರತೀಯ ಸೇನಾ ಪಡೆಯನ್ನು ಮೋದಿಯ ಸೇನೆ ಎಂದು ವ್ಯಾಖ್ಯಾನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಿಗೆ ಎಚ್ಚರಿಗೆ ಕೊಟ್ಟು ಬಿಡಲಾಯಿತೇ ಹೊರತು ಯಾವ ಶಿಸ್ತುಕ್ರಮವನ್ನೂ ಜರುಗಿಸಲಿಲ್ಲ. ಇನ್ನೊಂದೆಡೆ ವಿರೋಧ ಪಕ್ಷಗಳ ಕುರಿತು ಈ ಸಡಿಲ ಧೋರಣೆ ಕಾಣಿಸುತ್ತಿಲ್ಲ. ಪ್ರಧಾನಮಂತ್ರಿ ಕಿಸಾನ್‍ಯೋಜನೆಯನ್ವಯ, ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ನರೇಂದ್ರ ಮೋದಿಯವರಿಗೆ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗವು ಸಾಲ ಮನ್ನಾದ ಫಲಾನುಭವಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅವಕಾಶ ನೀಡಿಲ್ಲ ಎಂಬ ದೂರಿದೆ. ವಿರೋಧ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಆದಾಯ ತೆರಿಗೆ ಇಲಾಖೆಯ ಬಗ್ಗೆಯೂ ಚುನಾವಣಾ ಆಯೋಗ ಏನನ್ನೂ ಹೇಳುತ್ತಿಲ್ಲ. ನೀತಿಸಂಹಿತೆ ಜಾರಿಯಾದ ಬಳಿಕ ಏಕಮುಖವಾಗಿ ಹೀಗೆ ದಾಳಿ ಮಾಡುವುದು ಕಾನೂನು ಬದ್ಧವೇ ಎಂಬ ಪ್ರಶ್ನೆ ಖಂಡಿತ ಪ್ರಸ್ತುತ. ಇಂಥ ಪ್ರಶ್ನೆಗಳಿಗೆ ಟಿ.ಎನ್. ಶೇಷನ್‍ ಧೈರ್ಯದಿಂದ ಎದೆಯೊಡ್ಡಿದ್ದರು. ಚುನಾವಣಾ ಆಯೋಗವು ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆ ಎಂಬುದು ಈ ದೇಶಕ್ಕೆಗೊತ್ತಾದದ್ದೇ ಅವರಿಂದ. ಅವರು ಚುನಾವಣಾ ಆಯೋಗಕ್ಕೆ ಹೊಸ ರೂಪವನ್ನು ಕೊಟ್ಟರು. ಉಗುರು-ಹಲ್ಲುಗಳನ್ನು ಉದುರಿಸಿಕೊಂಡು ಸಾಧು ಹುಲಿಯಂತಾಗಿದ್ದ ಆಯೋಗಕ್ಕೆಅವರು ಉಗುರು ಹಲ್ಲುಗಳನ್ನು ಮರಳಿಸಿದುದಷ್ಟೇ ಅಲ್ಲ, ಪ್ರಶ್ನಿಸಿದವರ ಉಗುರು-ಹಲ್ಲುಗಳನ್ನು ಕಿತ್ತು ಹಾಕಲೂ ಹಿಂಜರಿಯಲಿಲ್ಲ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಒಂದೊಂದೇ ಕಾರ್ಯಕ್ರಮಗಳನ್ನು ಆಡಳಿತ ಪಕ್ಷ ಮುನ್ನೆಲೆಗೆ ತರುತ್ತಿದೆ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರವುಳ್ಳ ಚುನಾವಣಾ ಆಯೋಗವು ಪ್ರಶ್ನಿಸದೇ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದರೆ, ಆಯೋಗ ಭಯದಲ್ಲಿದೆ ಎಂದೇ ಅರ್ಥ. ಚುನಾವಣೆ ಘೋಷಣೆಯಾದ ಬಳಿಕ ಯಾಕೆ ನಮೋ ಟಿ.ವಿ. ಪ್ರಸಾರವನ್ನು ಆರಂಭಿಸುತ್ತದೆ, ವೈಜ್ಞಾನಿಕ ಸಾಧನೆಯನ್ನು ಘೋಷಿಸುವ ನೆಪದಲ್ಲಿ ಯಾಕೆ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತಾಡುತ್ತಾರೆ, ಯಾಕೆ ಅವರ ಜೀವನಾಧಾರಿತ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ಪ್ರಶ್ನೆಗೆಉತ್ತರ ಅತ್ಯಂತ ಸ್ಪಷ್ಟ. ಮತದಾರರನ್ನು ಓಲೈಸುವುದು. ಅಕ್ಷರಗಳಲ್ಲಿ ಬರೆದಿಟ್ಟ ನೀತಿಸಂಹಿತೆಯಲ್ಲಿ ಇವೆಲ್ಲವನ್ನೂ ಯಥಾಪ್ರಕಾರ ನಮೂದಿಸಿಲ್ಲದೇ ಇರಬಹುದು. ಆದರೆ, ಆ ಅಕ್ಷರಗಳ ಆಶಯದಲ್ಲಿ ಖಂಡಿತ ಇವೆಲ್ಲ ಒಳಗೊಂಡಿರುತ್ತದೆ. ‘ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸು ಸಾಧಿಸಿರುವುದನ್ನು ನೆಪವಾಗಿಸಿಕೊಂಡು ದೇಶವನ್ನುದ್ದೇಶಿಸಿ ಮಾತಾಡುವುದು ಮತ್ತು ಆ ಮಾತನ್ನು ಖಾಸಗಿ ಚಾನೆಲ್‍ಗಳಿಂದ ಪಡೆದುಕೊಂಡು ದೂರದರ್ಶನ ಪ್ರಸಾರ ಮಾಡುವುದು ತಪ್ಪು’ ಎಂಬುದಾಗಿ ನೀತಿ-ಸಂಹಿತೆಯಲ್ಲಿ ಬರೆದಿಟ್ಟಿರುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಉಪಗ್ರಹ ನಿರೋಧಕ ಕ್ಷಿಪಣಿ ಉಡಾವಣೆ ಎಂಬುದು ಆಯಾ ಕಾಲದ ಬೆಳವಣಿಗೆ. ಪ್ರಧಾನಮಂತ್ರಿ ಕಿಸಾನ್‍ ಯೋಜನೆಯಾಗಲಿ, ರೈತರ ಸಾಲ ಮನ್ನಾವಾಗಲಿ ಆಯಾ ಸಂದರ್ಭದ ಯೋಜನೆಗಳೇ ಹೊರತು ನೀತಿ ಸಂಹಿತೆಯಲ್ಲಿ ಅಕ್ಷರಗಳಲ್ಲಿ ನೇರವಾಗಿ ಬರೆದಿಡಬಹುದಾದಂತಹ ವಿಷಯವಲ್ಲ. ಆದ್ದರಿಂದ,

ನೀತಿ ಸಂಹಿತೆಯನ್ನು ಅಕ್ಷರಗಳ ಬದಲು ಆಶಯವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಟಿ.ಎನ್. ಶೇಷನ್ ಮಾಡಿದ್ದು ಇದನ್ನೇ. ಆವರೆಗೆ ಬರೇ ಅಕ್ಷರಗಳಲ್ಲಿ ಕಳೆದುಹೋಗಿದ್ದ ನೀತಿ ಸಂಹಿತೆಯನ್ನು ಅವರು ಆಶಯಾರ್ಥವಾಗಿ ಬದಲಿಸಿದ್ದರು. ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಎಲ್ಲದರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರು. ಸದ್ಯ ಅನಾಥವಾಗಿರುವುದು ಈ ಗುಣವೇ. ನಿರ್ದಾಕ್ಷಿಣ್ಯ ಎಂಬುದು ದಾಕ್ಷಿಣ್ಯಕ್ಕೆ ಬಿದ್ದಿದೆ. ಆಡಳಿತ ಪಕ್ಷದ ಮನೆಯ ಬೆಕ್ಕಿನಂತೆ ಚುನಾವಣಾ ಮಂಡಳಿ ವರ್ತಿಸುತ್ತಿದೆ. ಇದು ಕಳವಳಕಾರಿ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶದ ಚುನಾವಣಾ ಆಯೋಗವು ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಧೈರ್ಯವನ್ನು ಪ್ರದರ್ಶಿಸದೇ ಹೋದರೆ, ಆಡಳಿತ ಪಕ್ಷವು ಮುಂದೊಂದು ದಿನ ಚುನಾವಣಾ ಆಯೋಗವನ್ನು ತಮ್ಮ ಚುನಾವಣಾ ಕಚೇರಿಯಾಗಿ ಪರಿವರ್ತಿಸಿಬಿಟ್ಟೀತು.