ಒಂದು ಕೈಯಲ್ಲಿ ಸೇವಾ ರೈಫಲ್ ಇನ್ನೊಂದು ಕೈಯಲ್ಲಿ ಹಾಲು ಹಿಡಿದು ಶ್ರಮಿಕ್ ರೈಲಿನತ್ತ ಓಡುವ ರೈಲ್ವೆ ಪೊಲೀಸ್ ವಿಡಿಯೋ ವೈರಲ್

0
658

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.5: ಮೂರು ತಿಂಗಳ ಮಗುವಿಗೆ ಹಾಲು ನೀಡಲು ಭೋಪಾಲ್‌ನಲ್ಲಿ ಚಲಿಸುತ್ತಿದ್ದ ರೈಲಿನತ್ತ ಓಡೋಡಿ ಬಂದ ರೈಲ್ವೆ ಪೊಲೀಸ್‌ ವಿಡಿಯೋ ದೇಶಾದ್ಯಂತ ಹೃದಯಗಳನ್ನು ಗೆದ್ದಿದ್ದು ಭಾರತೀಯ ರೈಲ್ವೆಯ ‘ಪೋಸ್ಟರ್ ಬಾಯ್’ ಖ್ಯಾತಿಗೆ ಪಾತ್ರವಾಗಿದೆ‌.

ಸಚಿವ ಪಿಯೂಷ್ ಗೋಯಲ್ ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಇಂದರ್ ಯಾದವ್ ಅವರನ್ನು ಉಸೇನ್ ಬೋಲ್ಟ್‌ಗೆ ಹೋಲಿಸಿ ಭಾರತೀಯ ರೈಲ್ವೆ ಒದಗಿಸುವ ಸೇವೆಗಳ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

“ಒಂದು ಕೈಯಲ್ಲಿ ರೈಫಲ್ ಮತ್ತು ಇನ್ನೊಂದು ಕೈಯಲ್ಲಿ ಹಾಲು – ಭಾರತೀಯ ರೈಲ್ವೆ ಉಸೇನ್ ಬೋಲ್ಟ್ ಅವರನ್ನು ಹೇಗೆ ಮರೆತು ಬಿಟ್ಟಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಹೋಗುವ ಶ್ರಮಿಕ್ ವಿಶೇಷ ರೈಲು ಕೆಲವು ನಿಮಿಷಗಳ ಕಾಲ ಭೋಪಾಲ್ ನಿಲ್ದಾಣದಲ್ಲಿ ನಿಂತಾಗ ಮಗುವಿನ ತಾಯಿ ಶಫಿಯಾ ಹಶ್ಮಿ ಆರ್‌ಪಿಎಫ್ ಅಧಿಕಾರಿ ಇಂದರ್ ಯಾದವ್ ಅವರನ್ನು ಸಹಾಯಕ್ಕಾಗಿ ಕೇಳಿದ್ದರು. ತನ್ನ ಮಗಳಿಗೆ ಹಾಲಿನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದ್ದರಿಂದ ಬಿಸ್ಕತ್ತುಗಳನ್ನು ನೀರಿನಲ್ಲಿ ಅದ್ದಿ ತಿನ್ನಲು ನೀಡಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಮಹಿಳೆ ಆರ್‌ಪಿಎಫ್ ಕಾನ್‌ಸ್ಟೇಬಲ್ ಬಳಿ ಹೇಳಿದ್ದರು.

ಆದರೆ ಆ ಕೆಲವೇ ನಿಮಿಷಗಳಲ್ಲಿ, ಮೂರು ತಿಂಗಳ ಹೆಣ್ಣು ಮಗುವಿಗೆ ಹಾಲು ವ್ಯವಸ್ಥೆ ಮಾಡುವ ಮೊದಲೇ ರೈಲು ಚಲಿಸಲು ಪ್ರಾರಂಭಿಸಿತು.

ಇಂದರ್ ಯಾದವ್, ತಾನು ಕೆಲವೇ ಸೆಕೆಂಡುಗಳಲ್ಲಿ ತಡವಾಗಿರುವುದನ್ನು ಅರಿತುಕೊಂಡು ಚಲಿಸುವ ರೈಲಿನ ಭೋಗಿಯತ್ತ ಓಡಿ ಬಂದರು. ಒಂದು ಕೈಯಲ್ಲಿ ತಮ್ಮ ಸೇವಾ ರೈಫಲ್‌ನ್ನು ಇನ್ನೊಂದು ಕೈಯಲ್ಲಿ ಹಾಲಿನ ಪ್ಯಾಕೆಟ್‌ನ್ನು ಹಿಡಿದುಕೊಂಡು ಓಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರ ಈ ಸಹಾಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.