ನಾಷ್‍ವಿಲ್ಲ ಸ್ಫೋಟ: ಮೊದಲ ಆತ್ಮಾಹುತಿ ದಾಳಿ ಎಂಬುದನ್ನು ದೃಢೀಕರಿಸಿದ ಅಮೇರಿಕ

0
449

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.29: ಕ್ರಿಸ್‍ಮಸ್ ದಿನದಂದು ಅಮೆರಿಕದ ನಾಷ್‍ವಿಲ್ಲದ ಎಟಿ ಆಂಡ್ ಟಿ ಕೇಂದ್ರದ ಸಮೀಪ ನಡೆದಿದ್ದ ಬಾಂಬ್ ಸ್ಫೋಟವು ಆತ್ಮಾಹುತಿ ದಾಳಿಯಾಗಿತ್ತು ಎಂದು ದೃಢಪಟ್ಟಿದೆ. ಅಮೆರಿಕದ 63 ವರ್ಷದ ಆಂಟನಿ ಕ್ವಿನ್ ವಾರ್ನರ್ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದರು. ಸಾವು ನೋವು ಸಂಭವಿಸಿಲ್ಲ.

ಬಾಂಬ್ ಸ್ಫೋಟದಿಂದ ಎಟಿ ಆಂಡ್ ಟಿ ಕೇಂದ್ರದ ಕಟ್ಟಡಕ್ಕೆ ಹಾನಿಯಾಗಿದೆ. ಆತ್ಮಾಹುತಿ ದಾಳಿಗೆ ಬಳಸಿದ ವ್ಯಾನ್‍ಅನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ ಆಂಟನಿ ಕ್ವಿನ್ ಆತ್ಮಾಹುತಿ ದಾಳಿ ಮಾಡಿದ್ದಾಗಿ ತಿಳಿದು ಬಂದಿದೆ. ಕ್ವಿನ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ. ಸಿಸಿಟಿ ದೃಶ್ಯಗಳು ಕೂಡ ಆಂಟನಿ ಕ್ವಿನ್ ಒಬ್ಬನೇ ದಾಳಿ ನಡೆಸಿರುವುದನ್ನು ಬಯಲುಗೊಳಿಸಿವೆ.

ಆದರೆ ದುಷ್ಕರ್ಮಿಯ ಉದ್ದೇಶ ಏನಾಗಿತ್ತು ಎಲ್ಲಿಂದ ಸ್ಫೋಟಕಗಳನ್ನು ತಂದಿದ್ದ ಎಂಬುದು ತಿಳಿದು ಬಂದಿಲ್ಲ. ಜಗತ್ತಿನ ಹಲವಾರು ಕಡೆ ಆತ್ಮಾಹುತಿ ದಾಳಿ ನಡೆದಿದ್ದರೂ ಅಮೆರಿಕದಲ್ಲಿ ಸಮೀಪ ಕಾಲದ ಇತಿಹಾಸದಲ್ಲಿ ಇದು ಮೊದಲ ಬಾರಿ ನಡೆದ ಆತ್ಮಾಹುತಿ ದಾಳಿಯಾಗಿದೆ. 5ಜಿ ಅಮೆರಿಕದ ಪ್ರಜೆಗಳ ಖಾಸಗಿ ವಿವರಗಳನ್ನು ಸೋರಿಕೆ ಮಾಡುತ್ತಿವೆ ಎಂಬ ಆರೋಪದ ನಂತರ ಜನರ ನಡುವೆ ಹೆದರಿಕೆ ನೆಲೆಸಿದೆ. ಆದ್ದರಿಂದ ಕ್ವಿನ್ ಆತ್ಮಾಹುತಿ ದಾಳಿ ನಡೆಸಿರಬಹುದೆಂದು ತನಿಖಾಧಿಕಾರಿಗಳಿಂದ ಸಿಕ್ಕಿದ ಅನಧಿಕೃತ ವಿವರಗಳು ವರದಿಯಾಗಿವೆ.