ತಲಾಕ್ ಆಧ್ಯಾದೇಶ: ಕೇಂದ್ರದ ಚುನಾವಣಾ ತಂತ್ರ- ಜಮಾಅತೆ ಇಸ್ಲಾಮೀ ಹಿಂದ್

0
893

ನವದೆಹಲಿ: ತ್ರಿವಳಿ ತಲಾಕ್‍ನ ಕುರಿತು ಕೇಂದ್ರ ಸರಕಾರವು ಹೊರಡಿಸಿರುವ ಆಧ್ಯಾದೇಶದ ಕುರಿತು ಜಮಾಅತೆ ಇಸ್ಲಾಮೀ ಹಿಂದ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಆದೇಶವು ಸಂವಿಧಾನದ ವಿರುದ್ಧವಾಗಿದ್ದು ಮುಂಬರುವ 2019ರ ಚುನಾವಣೆಯ ಮೇಲೆ ಹಿಡಿತ ಸಾಧಿಸಲು ಈ ಯತ್ನ ನಡೆಯುತ್ತಿದೆ ಎಂಬುದು ಸಾಬೀತು ಪಡಿಸಿದಂತಿದೆ.

ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್‍ನ ರಾಷ್ಟ್ರಾಧ್ಯಕ್ಷರಾದ ಮೌಲಾನಾ ಸೈಯ್ಯದ್ ಜಲಾಲುದ್ದೀನ್ ಉಮರಿಯವರು, “ಈ ಪ್ರಕರಣವು ಈಗಾಗಲೇ ರಾಜ್ಯ ಸಭೆಯಲ್ಲಿ ಇರ್ತಥ್ಯವಾಗದೇ ಉಳಿದಿರುವಾಗ ಸರಕಾರವು ಆಧ್ಯಾದೇಶ ಹೊರಡಿಸಿರುವುದು ಸಮಂಜಸವಲ್ಲ. ಸಾಂವಿಧಾನಿಕವಾಗಿ ಪ್ರತಿಯೊಬ್ಬ ನಾಗರಿನಿಗೂ ತನ್ನ ಧರ್ಮವನ್ನು ಅನುಸರಿಸುವ ಧಾರ್ಮಿಕ ಹಕ್ಕಿದ್ದು ಸರಕಾರವು ಬಲವಂತವಾಗಿ ಮುಸ್ಲಿಮ್ ವೈಯಕ್ತಿಕ ಕಾನೂನು ನಿಯಮಾವಳಿಗಳಲ್ಲಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಿದೆ. ತ್ರಿವಳಿ ತಲಾಕ್ ನೀಡುವುದೇ ಶರೀಅತ್‍ನಲ್ಲಿ ಅಪರಾದವಾಗಿರುವಾಗ ಅದನ್ನು ರಾಜಕೀಯ ಒತ್ತಾಸೆಗಳಿಗೆ ತಳ್ಳಿ ಕ್ರಿಮಿನಲ್ ಪ್ರಕರಣಗಳಿಗೆ ಸೇರ್ಪಡೆಗೊಳಿಸುತ್ತಿರುವುದು ವಿಷಾದನೀಯ. ಸರಕಾರವು, ತಲಾಕ್ ನೀಡಿದ ಪತಿಯನ್ನು ಜೈಲಿಗಟ್ಟಿ ಆತನಿಂದ ಪರಿಹಾರ ಧನವನ್ನು ಒದಗಿಸುವ ನಿಯಮಾವಳಿಯನ್ನು ಹೇರುತ್ತಿದೆಯಾದರೆ ಇದು ಪ್ರಾಯೋಗಿಕವಾಗಿ ನಡೆಯುವಂತಹ ಕಾರ್ಯಾಚರಣೆಯಲ್ಲ. ಪತಿಯು ಜೈಲಿನಲ್ಲಿದ್ದುಕೊಂಡು ಕುಟುಂಬವನ್ನು ಪೋಷಿಸಬೇಕೆಂದು ಹೇಳುವುದಾದರೆ ಆತನ ಆರ್ಥಿಕ ಸ್ಥಾನಮಾನಗಳನ್ನು ಪರಿಗಣಿಸಬೇಕಾದ ಅಗತ್ಯತೆ ಇದೆ” ಎಂದರು.

ಒಂದು ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಇಂತಹ ಪ್ರಕರಣಗಳಲ್ಲಿ ಸಿಲುಕಿಸಿ ಸಂಕಷ್ಟಕ್ಕೊಳ ಪಡಿಸಲು ಸರಕಾರವು ಪೂರ್ವ ನಿಯೋಜಿತ ತಯಾರಿ ನಡೆಸಿದಂತಿದೆ ಎಂದವರು ಹೇಳಿದ್ದಾರೆ.