ಕೋವಿಡ್ ಪಾಸಿಟಿವ್ ಹಿನ್ನೆಲೆ: ಗ್ರಾಮಸ್ಥರಿಂದ ಪ್ರವೇಶ ನಿರಾಕರಿಸಲ್ಪಟ್ಟ ತಂದೆಗೆ ನೀರು ಕೊಡಲು ಹರಸಾಹಸ ಪಟ್ಟ ಮಗಳು

0
1867

ಆಂಧ್ರದ ಶ್ರೀಕಾಕುಲಂನಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯ ವೀಡಿಯೋ ವೈರಲ್

ಸನ್ಮಾರ್ಗ ವಾರ್ತೆ

ಹೈದರಾಬಾದ್: ಕೋರೋನಾ ಎರಡನೇ ಅಲೆಯು‌ ನಮ್ಮ ದೇಶದಲ್ಲಿ ರುದ್ರತಾಂಡವಾಡುತ್ತಿರುವ ಮಧ್ಯೆಯೇ ಹೃದಯ ವಿದ್ರಾವಕ‌ ಘಟನೆಗಳು ಒಂದರ ಮೇಲೊಂದರಂತೆ ವರದಿಯಾಗುತ್ತಿದೆ.‌ ಕೊರೋನಾ ತಮಗೂ ಹರಡಬಹುದು ಎಂಬ ಭಯದಿಂದ ಜನರು ಕೋವಿಡ್ ಪಾಸಿಟಿವ್ ವ್ಯಕ್ತಿಗಳು ತಮ್ಮ ಆತ್ಮೀಯರೇ ಆಗಿದ್ದರೂ ಅಪರಿಚಿತರಂತೆ ವರ್ತಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವೇ ಸರಿ. ಹೃದಯ ಕಲಕುವ ಘಟನೆಗಳಿಗೆ ಆಂಧ್ರ ಪ್ರದೇಶದ ಶ್ರೀಕಾಕುಲಂನಲ್ಲಿ ನಡೆದ ಘಟನೆಯೊಂದು ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಆಂಧ್ರದ ಶ್ರೀಕಾಕುಲಂ ನ ನಿವಾಸಿ 50 ರ ಹರೆಯದ ವ್ಯಕ್ತಿಯೋರ್ವರು ವಿಜಯವಾಡದಲ್ಲಿದ್ದರು. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತನ್ನ ಗ್ರಾಮವಾದ ಶ್ರೀಕಾಕುಲಂಗೆ ಆಗಮಿಸಿದ್ದರು. ಆದರೆ ವಿಷಯ ತಿಳಿದ ಗ್ರಾಮಸ್ಥರು ಆತ ಗ್ರಾಮಕ್ಕೆ ಕಾಲಿಟ್ಟರೆ ಇಡೀ ಗ್ರಾಮಕ್ಕೆ ಸೋಂಕು ಹರಡುವ ಭೀತಿಯಿಂದ ಬಹಿಷ್ಕಾರ ಹಾಕಿ, ಗ್ರಾಮದ ಹೊರಗಡೆ ಇರುವಂತೆ ತಿಳಿಸಿದ್ದಾರೆ.

ಈ ಮಧ್ಯೆ ಸದ್ಯ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಆತನ ಮಗಳು ತನ್ನ ತಂದೆ ಉಸಿರಾಟ ನಡೆಸಲು ಹರಸಾಹಸ ಪಡುತ್ತಿರುವುದನ್ನು ನೋಡಲಾಗದೆ ನೀರು ಕುಡಿಸಲು ಹೊರಟಾಗ ಆಕೆಯ ತಾಯಿಯೇ ಕೊರೋನ ಸೋಂಕು ಹರಡುವ ಭಯದಿಂದ ದೂರ ಮಾಡುತ್ತಿರುವ ದೃಶ್ಯವು ಎಂತಹ‌ ಕಲ್ಲು ಮನಸ್ಸಿನವರನ್ನು ಕರಗುವಂತೆ ಮಾಡಿದೆ.

ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿಗೆ ಕೋರೋನಾ ಪಾಸಿಟಿವ್ ಬಂದಿತ್ತು. ಆ ಬಳಿಕ ಶ್ರೀಕಾಕುಲಂನ ತನ್ನ ಮನೆಗೆ ಬಂದಿದ್ದ. ಗ್ರಾಮಕ್ಕೆ ಮರಳಿದ್ದ ಆತನನ್ನು ಹಳ್ಳಿಯಲ್ಲಿ ಇರದೆ ಹಳ್ಳಿಯ ಹೊರಗಿನ ಹೊಲಗಳ ಬಳಿಯ ಗುಡಿಸಲಿನಲ್ಲಿ ಇರಲು ಒತ್ತಾಯಿಸಿದ್ದಾರೆ.

ತನ್ನ ತಂದೆ ಉಸಿರಾಟ‌ ನಡೆಸಲು ಕಷ್ಟ ಪಡುತ್ತಿರುವುದನ್ನು ಸಹಿಸಲಾಗದೆ ಆತನ 17ರ ಹರೆಯದ ಮಗಳು ಬಾಟಲಿಯಲ್ಲಿ ನೀರು ಹಿಡಿದು ಕುಡಿಸಲು ಅಣಿಯಾದಾಗ ಆ ವ್ಯಕ್ತಿಯ ಪತ್ನಿ (ಆಕೆಯ ತಾಯಿ)ಯೇ ತಡೆಯಲು ಯತ್ನಿಸಿದ ದೃಶ್ಯ ವೀಡಿಯೋ ದಲ್ಲಿ ದಾಖಲಾಗಿದೆ. ಅಲ್ಲಿನ ಗ್ರಾಮಸ್ಥರೊಬ್ಬರು ಈ‌‌ ವೀಡಿಯೋ ಚಿತ್ರೀಕರಿಸಿದ್ದು, ದೂರದಿಂದಲೇ ಹೆಚ್ಚಿನ ಗ್ರಾಮಸ್ಥರು ಈ ಘಟನೆಯನ್ನು ವೀಕ್ಷಿಸುತ್ತಿರುವುದು ವೀಡಿಯೋ ದಲ್ಲಿ ದಾಖಲಾಗಿದೆ.

ಈ ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯು ಆ ವ್ಯಕ್ತಿಗೆ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆ ಹಾಸಿಗೆಗಳು ಲಭ್ಯವಿಲ್ಲ ಎಂದು ಹೇಳುವುದು ಕೇಳಿದೆ.‌ ಸ್ವಲ್ಪ ಸಮಯದ ನಂತರ ಆ ವ್ಯಕ್ತಿಯು ಉಸಿರಾಟ ನಡೆಸಲು ಸಾಧ್ಯವಾಗದೆ ನಿಧನರಾದರೆಂದು ತಿಳಿದು ಬಂದಿದೆ.

ಘಟನೆ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ದೇಶದ ಪ್ರಮುಖ ಸುದ್ದಿ ಚಾನಲ್ NDTV ಸೇರಿದಂತೆ ಹಲವು ಮಾಧ್ಯಮಗಳು ಘಟನೆಯನ್ನು ವರದಿ ಮಾಡಿದೆ.

ವ್ಯಕ್ತಿಯ ನಿಧನದ ಬಳಿಕ ಕುಟುಂಬದವರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ನೆಗೆಟಿವ್ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶದಲ್ಲಿ ಒಂದು ದಿನದಲ್ಲಿ ಸುಮಾರು 20,000 ಪ್ರಕರಣಗಳು ಮತ್ತು 71 ಸಾವುಗಳು ವರದಿಯಾಗಿವೆ. ಈವರೆಗೆ ರಾಜ್ಯದಲ್ಲಿ ಸುಮಾರು 11 ಲಕ್ಷ ಪ್ರಕರಣಗಳು ವರದಿಯಾಗಿದೆ.

ವೀಡಿಯೋ ಕೃಪೆ: NDTV