ಚಾರಿತ್ರ್ಯದ ಹೊರತು ಬೇರೆ ದಾರಿಯಿಲ್ಲ…

0
413

ಸನ್ಮಾರ್ಗ ವಾರ್ತೆ

ಬೆಂಗಳೂರಿನ ದಾರುಸ್ಸಲಾಮ್‌ನಲ್ಲಿ ನಗರದ ಮುಸ್ಲಿಮ್ ವಿದ್ವಾಂಸರು, ಗಣ್ಯರು, ಪತ್ರಕರ್ತರನ್ನುದ್ದೇಶಿಸಿ ಜಮಾಅತೆ ಇಸ್ಲಾಮೀ ಹಿಂದ್‌ನ ಅಖಿಲ ಭಾರತ ಅಧ್ಯಕ್ಷರಾಗಿದ್ದ ಮೌಲಾನಾ ಸಯ್ಯದ್ ಜಲಾಲುದ್ದೀನ್ ಉಮರಿಯವರು 2015ರಲ್ಲಿ ಮಾಡಿದ ಭಾಷಣದ ಸಾರಾಂಶ.

ದೇಶವು ಇವತ್ತು ಮುಸ್ಲಿಮ್ ಸಮುದಾಯವನ್ನು ಉತ್ತಮ ದೃಷ್ಟಿಯಿಂದ ನೋಡುತ್ತಿಲ್ಲ. ಈ ದೇಶಕ್ಕೆ ಮುಸ್ಲಿಮ್ ಸಮುದಾಯದ ಆವಶ್ಯಕತೆ ಇಲ್ಲ ಎಂಬ ಭಾವನೆ ಮೂಡಿಸಲಾಗುತ್ತಿದೆ. 15 ಕೋಟಿಯಷ್ಟಿರುವ ಮುಸ್ಲಿಮರು ಈ ದೇಶವನ್ನು ತೊರೆಯಲು ಬಯಸಿದರೆ ಯಾರಿಗೂ ಕೂಡಾ ಬೇಸರವಾಗಲಾರದೇನೋ. ಅಮೇರಿಕದಲ್ಲಿ ಯಹೂದಿಗಳು 3% ಇದ್ದಾರೆ. ಆದರೆ ಇಷ್ಟು ಸಣ್ಣ ಸಂಖ್ಯೆಯಲ್ಲಿದ್ದರೂ ಅಲ್ಲಿಯ ಇಡೀ ವ್ಯವಸ್ಥೆಯನ್ನು ಅವರು ನಿಯಂತ್ರಿಸುತ್ತಿದ್ದಾರೆ. ಒಂದು ವೇಳೆ, ಯಹೂದಿಗಳು ದೇಶವನ್ನು ತೊರೆಯಲು ಬಯಸಿದರೆ ಅಮೇರಿಕವು ಅವರನ್ನು ತೊರೆಯಲು ಬಿಡಲಾರದು. ಆ ದೇಶದಲ್ಲಿ ಒಬ್ಬ ದೊಡ್ಡ ಚಿಂತಕ, ತತ್ವಜ್ಞಾನಿ, ವಿಜ್ಞಾನಿ, ವಿಶ್ವವಿದ್ಯಾನಿಲಯದ ಹೊಣೆಗಾರರು ಯಾರೆಂದು ಕೇಳಿದರೆ ಯಹೂದಿ ಎಂಬ ಉತ್ತರ ಸಿಗಬಹುದು. ಮಾಧ್ಯಮ ಕ್ಷೇತ್ರ (Media) ಅವರ ಹಿಡಿತದಲ್ಲಿದೆ. ತಮ್ಮ ಈ ಎಲ್ಲ ಸೇವೆಯಿಂದಾಗಿಯೇ ಅವರು ಅಮೇರಿಕದ ಅಗತ್ಯವಾಗಿದ್ದಾರೆ.

ನಾವು ಆ ರೀತಿಯಲ್ಲಿ ನಮ್ಮನ್ನು ಸಿದ್ಧಗೊಳಿಸಿಲ್ಲ. ಒಂದುವೇಳೆ ನಾವು ಈ ರಾಷ್ಟ್ರವನ್ನು ತೊರೆದರೆ, ಇಲ್ಲಿಯ ನ್ಯಾಯದ ವ್ಯವಸ್ಥೆ ಹೇಗೆ ನಡೆಯುವುದು, ಆಡಳಿತ, ಶೈಕ್ಷಣಿಕ ವ್ಯವಸ್ಥೆಗಳನ್ನು ಹೇಗೆ ಮುನ್ನಡೆಸುವುದು ಎಂದು ಯಾರು ಕೂಡಾ ಸಂಕಟ ಪಡುವ ಸಾಧ್ಯತೆ ಇಲ್ಲ. ಯಾವೆಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ಸಾಚಾರ್ ಸಮಿತಿಯು ತನ್ನ ವರದಿಯಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದೆ. ಯಾವ ಕ್ಷೇತ್ರದಲ್ಲಿಯೂ ನಮ್ಮ ಅಸ್ತಿತ್ವ ಇಲ್ಲದಾಗಿದೆ. ಸರಕಾರಗಳು ನಮ್ಮನ್ನು ನಿರ್ಲಕ್ಷಿಸಿವೆ ಎಂದು ಹೇಳಲಾಗುತ್ತದೆ ನಿಜವೇ. ಆದರೆ ನಮ್ಮ ಸಬಲೀಕರಣಕ್ಕಾಗಿ ನಾವು ಯಾವ ಪ್ರಯತ್ನ ಮಾಡಿದ್ದೇವೆ

ಮುಸ್ಲಿಮರು ಟಿವಿ ಚಾನೆಲ್ ಆರಂಭಿಸಬೇಕೆಂದು ಸಭಿಕರೋರ್ವರು ಅಭಿಪ್ರಾಯ ಪಟ್ಟರು. ನಿಜ ಅದರ ಆವಶ್ಯಕತೆ ಇದೆ. ಆದರೆ ಇದನ್ನು ಮುನ್ನಡೆಸಲು ಯೋಗ್ಯರು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಇದಕ್ಕೆ ಕೋಟಿಗಟ್ಟಲೆ ಹಣದ ಆವಶ್ಯಕತೆ ಇದೆ. ಒಂದುವೇಳೆ ಹಣ ಹೊಂದಿಸಿದರೂ ಮೀಡಿಯಾ ವ್ಯಕ್ತಿಗಳನ್ನು ತರುವುದು ಅಷ್ಟು ಸುಲಭವಲ್ಲ. ಪ್ರತಿಯೊಂದು ಪತ್ರಿಕೆಯಲ್ಲಿಯೂ ವಿವಿಧ ಕಾಲಂಗಳಿರುತ್ತವೆ. ಆ ಎಲ್ಲ ಕಾಲಂಗಳಲ್ಲಿ ಬರೆಯಲು ಬೇರೆ ಬೇರೆ ರೀತಿಯ ಪತ್ರಕರ್ತರ ಅಗತ್ಯ ಸಾವಿರಾರು ಇವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬರೆಯಲು ನಮ್ಮಲ್ಲಿ ಬರಹಗಾರರು ಇದ್ದಾರೆಯೇ?

ಈಜಿಪ್ಟ್ ಮತ್ತು ಅಲ್ಜೀರಿಯಾದ ಇಸ್ಲಾಮೀ ಆಂದೋಲನವು ಯಶಸ್ವಿಗೊಂಡಿಲ್ಲ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ. ಇದರ ಹೊರತು ನಾವು ಜನಾಭಿಪ್ರಾಯವನ್ನು ರೂಪಿಸಿಯೇ ಯಾವುದೇ ರೀತಿಯ ಬದಲಾವಣೆಯನ್ನು ತರಬಹುದು. ಇಸ್ಲಾಮೀ ಆಂದೋಲನವನ್ನು ಎಷ್ಟೇ ದಮನಿಸಿದರೂ ಶಾಂತಿ ಹಾಗೂ ಪ್ರಜಾಸತಾತ್ಮಕ ಮಾರ್ಗವನ್ನು ಮಾತ್ರ ಅನುಸರಿಸುತ್ತದೆ. ಇದು ಸಾಮಾನ್ಯ ವಿಷಯವಲ್ಲ.

ನಿಸ್ಸಂದೇಹವಾಗಿಯೂ ಪರಿಸ್ಥಿತಿಯು ಅನುಕೂಲಕರವಾಗಿಲ್ಲ. ನಮ್ಮ ವ್ಯಕ್ತಿ ಚಿತ್ರವು ಉತ್ತಮವಾಗಿಲ್ಲ. ನಾವು ಪರಸ್ಪರ ಒಳ ಜಗಳಗಳಲ್ಲಿ ನಿರತರಾಗಿದ್ದೇವೆ. ಆಡಳಿತಗಳು ನಮ್ಮನ್ನು ಜಗಳಾಡಿಸುತ್ತಿವೆ. ನಮ್ಮ ಚಿತ್ರವು ಕೆಟ್ಟದ್ದಾಗಿದೆ. ನಮ್ಮ ದೌರ್ಬಲ್ಯದಿಂದಾಗಿ ಪ್ರಬಲ ಶಕ್ತಿಗಳು ನಮ್ಮ ಮಧ್ಯೆ ಜಗಳವನ್ನು ಉಂಟು ಮಾಡುತ್ತಿವೆ. ಆದರೆ ಇದನ್ನು ಪ್ರತಿಭಟಿಸುವ ಶಕ್ತಿ ನಮ್ಮಲ್ಲಿಲ್ಲ.

ಸಾಮಾಜಿಕ ಸ್ಥಿತಿಗತಿಯು ತುಂಬಾ ಕೆಟ್ಟದಾಗಿದ್ದ ಸಂದರ್ಭದಲ್ಲಿಯೇ ಸಂದೇಶವಾಹಕರನ್ನು ಕಳುಹಿಸಲಾಗುತ್ತಿತ್ತು ಎಂಬುದು ನಮಗೆ ಗೊತ್ತು. ಕುರ್‌ಆನ್ ಅದನ್ನು ಸ್ಪಷ್ಟಪಡಿಸುತ್ತಿದೆ. ಅನುಕೂಲಕರ ಪರಿಸ್ಥಿತಿಯಿದ್ದಾಗ ಮಾತ್ರ ಸಂದೇಶವಾಹಕರನ್ನು ಕಳುಹಿಸಿರುವುದು ನಮಗೆ ಎಲ್ಲಿಯೂ ಕಾಣ ಸಿಗುವುದಿಲ್ಲ. ಪರಿಸ್ಥಿತಿಯನ್ನು ಸುಧಾರಿಸಲಿಕ್ಕಾಗಿ ಸಂದೇಶವಾಹಕರನ್ನು ಒಬ್ಬಂಟಿಗರಾಗಿ ಕಳುಹಿಸಲಾಯಿತು. ಹ. ಮೂಸಾರು(ಅ) ಹಾರೂನ್‌ರನ್ನು(ಅ) ಜೊತೆ ಕಳುಹಿಸಿಕೊಡಲು ಕೇಳಿಕೊಂಡಾಗ ಸಮ್ಮತಿಸಲಾಯಿತು. ಆದರೆ ಇಡೀ ಪರಿಸ್ಥಿತಿಯನ್ನು ಬದಲಿಸಲು ಕೇವಲ ಇಬ್ಬರೇ ವ್ಯಕ್ತಿಗಳಿದ್ದರು. ಆ ಸಂದರ್ಭದಲ್ಲಿ ಇದ್ದಂತಹ ಬನೀ ಇಸ್ರಾಯಿಲರ ಸ್ಥಿತಿಗಿಂತಲೂ ಇಂದು ನಮ್ಮ ಪರಿಸ್ಥಿತಿ ಕೀಳಾಗಿದೆಯೇ? ಫಿರ್ ಔನನು ಬನೀ ಇಸ್ರಾಈಲ್‌ನ ಗಂಡು ಮಕ್ಕಳನ್ನು ಕೊಲ್ಲುತ್ತಿದ್ದನು ಮತ್ತು ಹೆಣ್ಣು ಮಕ್ಕಳನ್ನು ಬದುಕಲು ಬಿಡುತ್ತಿದದನು. ಆತ ಬನೀ ಇಸ್ರಾಯಿಲರ ಜನಾಂಗವನ್ನು ವರ್ಗಗಳಾಗಿ ವಿಂಗಡಿಸಿದ್ದನು. ಕುರ್‌ಆನಿನ ಈ ಸೂಕ್ತಗಳು ಇಂದಿನ ಪರಿಸ್ಥಿತಿಗೆ ಅವತೀರ್ಣಗೊಂಡಿರುವಂತೆ ಅನಿಸುತ್ತದೆ.

“ಫಿರ್‌ಔನ್ ಹೇಳಿದನು, ಮೂಸಾ(ಅ) ಮತ್ತು ಹಾರೂನ್‌ರ(ಅ) ಜನಾಂಗವು ನನ್ನ ಗುಲಾಮವಾಗಿದೆ. ನೀನು (ಮೂಸಾ) ನಮ್ಮ ಅರಮನೆಯಲ್ಲಿ ಬೆಳೆದು ದೊಡ್ಡವನಾದವನು. ಈಗ ನಮಗೆ ಕಲಿಸಲು ಬಂದಿರುವೆಯಾ? ಮೂಸಾ(ಅ) ಹೇಳಿದರು, ಆಗಲಿ ನಿನ್ನ ಉಪಕಾರ ಭಾರವು ನನ್ನ ಮೇಲೆ ಇರಬಹುದು. ಆದರೆ ಇಡೀ ಸಮುದಾಯವನ್ನು ಗುಲಾಮರನ್ನಾಗಿಸುವುದು ಎಷ್ಟು ಸಮಂಜಸ?”

ಪರಿಸ್ಥಿತಿಯು ಕೆಟ್ಟದ್ದಾಗಿರಬಹುದು. ಅಂತಾರಾಷ್ಟ್ರೀಯ ಪರಿಸ್ಥಿತಿಯನ್ನು ನೋಡಿದರೆ ಖಂಡಿತ ನಿರಾಶೆಯಾಗುತ್ತದೆ. ಆದರೆ ನಿರಾಶೆಯಾಗುವ ಅವಶ್ಯಕತೆ ಇಲ್ಲ, ಓರ್ವ ಪ್ರಶ್ನಾರ್ಥಿ ಹೇಳಿದರು, ನಮಗೆ ದೇಶಭಾಂದವರೊಂದಿಗೆ ಸಂಬಂಧಗಳು ಬೇಕು. ನಿಜ ಇದರ ಹೊರತಾಗಿ ಈ ದೇಶದಲ್ಲಿ ನಮಗೆ ಬೇರೆ ದಾರಿಯಿಲ್ಲ. ದೇಶದಲ್ಲಿ ಮುಸ್ಲಿಮರು ಒಂದೇ ಕಡೆ ನೆಲೆಸಿಲ್ಲ. ಬದಲಾಗಿ ವಿವಿಧ ಕಡೆ ಹರಡಿಕೊಂಡಿದ್ದಾರೆ. ಅಸ್ಸಾಂನಲ್ಲಿ 55%, ಪಶ್ಚಿಮ ಬಂಗಾಳದಲ್ಲಿ 30%, ಕೇರಳ 25%, ತಮಿಳುನಾಡಿನ 5%ರಷ್ಟು ಇದ್ದಾರೆ. ಒಂದು ವೇಳೆ 25% ಜನ ಒಗ್ಗಟ್ಟಾದರೆ ಪ್ರಜಾಪ್ರಭುತ್ವದಲ್ಲಿ 75% ಮಂದಿಯನ್ನು ಸೋಲಿಸಬಹುದೆ? 5% ಮುಸ್ಲಿಮರು ತಮಿಳುನಾಡಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಸಂತೋಷವಾಗಿದ್ದಾರೆ. ಇದರ ಹೊರತಾಗಿಯೂ ಇಡೀ ರಾಷ್ಟ್ರದಲ್ಲಿ ಕೆಲವು ಕಡೆ 2% ಮತ್ತೆ ಕೆಲವು ಕಡೆ 10% ಮುಸ್ಲಿಮರಿದ್ದಾರೆ. ಈ ಅನುಪಾತದಿಂದ ಮುಸ್ಲಿಮೇತರರನ್ನು ಸೋಲಿಸಲು ಸಾಧ್ಯವೇ? ಎಲ್ಲಿಯವರೆಗೆ ನಮಗೆ ದೇಶ ಭಾಂದವರೊಂದಿಗೆ ಸಂಬಂಧಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯ ತನಕ ನಾವು ಮುಂದುವರಿಯಲು ಸಾಧ್ಯವಿಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಇರುವಂತಹ ಮುಸ್ಲಿಮರ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಉತ್ತರ ಪ್ರದೇಶ ಎಂಬ ಒಂದೇ ರಾಜ್ಯದಲ್ಲಿ ಮುಸ್ಲಿಮರು ಇದ್ದಾರೆ. ಒಡಿಸ್ಸಾದಲ್ಲಿ 2% ಮುಸ್ಲಿಮರು ಇದ್ದರೆ, ಪಂಜಾಬ್‌ನಲ್ಲಿ 2%ಕ್ಕಿಂತ ಕಡಿಮೆ ಇದ್ದಾರೆ.

ಎಲ್ಲಿಯವರೆಗೆ ದೇಶಬಾಂಧವರಲ್ಲಿ ನಮ್ಮ ಉತ್ತಮ ಸಂಬಂಧ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಇಸ್ಲಾಮ್ ಮತ್ತು ಮುಸ್ಲಿಮರ ಕುರಿತು ಇವರ ಅಭಿಪ್ರಾಯ ಉತ್ತಮಗೊಳ್ಳುವುದಿಲ್ಲ. ಮಾತ್ರವಲ್ಲ, ನಮ್ಮಿಂದ ಕ್ರಾಂತಿಯನ್ನು ಉಂಟು ಮಾಡಲೂ ಸಾಧ್ಯವಿಲ್ಲ. ಅಲ್ಲದೆ ಇಸ್ಲಾಮಿನ ವಿರುದ್ಧದ ಸಂಚಿಗೆ ಪ್ರತಿಭಟಿಸುವ ಮತ್ತು ಹೇಳಿಕೆ ಕೊಡುವ ಹೊರತಾಗಿ ಇನ್ನೇನೂ ನಮ್ಮಿಂದ ಸಾಧ್ಯವಿಲ್ಲ. ಹಾಗಂತ, ಇದು ಮಾಡಬಾರದು ಎಂದಲ್ಲ. ಭಾರತದ ಹೊರಗಿನ ರಾಷ್ಟ್ರಗಳ ಕುರಿತು ಅನುಕಂಪವನ್ನು ವ್ಯಕ್ತಪಡಿಸಬಹುದು ಇಂದಿನ ಪರಿಸ್ಥಿಯಲ್ಲಿ ಇದಕ್ಕೂ ಪ್ರಾಮುಖ್ಯತೆ ಇದೆ. ಆದರೆ ಇದರಿಂದಾಗಿ ಅಲ್ಲಿಯ ಆಡಳಿತಗಳ ಧೋರಣೆಯಲ್ಲಿ ಯಾವ ಬದಲಾವಣೆ ಆದೀತು?

ಮುಸ್ಲಿಮ್ ರಾಷ್ಟ್ರಗಳನ್ನು ನಾವು ನಮ್ಮ ಅಭಿಪ್ರಾಯಕ್ಕೆ ಬದ್ಧಗೊಳಿಸಲಾಗದು. ಅಲ್ಲಿ ನಮಗೆ ಹಿಡಿತವಿಲ್ಲ. ಆದ್ದರಿಂದ ನಮ್ಮ ರಾಷ್ಟ್ರದ ಕುರಿತು ನಾವು ಯೋಚಿಸಬೇಕಾಗಿದೆ. ಕೆಲವು ವಿಷಯಗಳು ನಮ್ಮ ಹಿಡಿತದಲ್ಲಿವೆ. ಅದರ ಪಾಲನೆಯಲ್ಲಿ ಯಾವುದೇ ಅಡೆತಡೆಗಳಿಲ್ಲ.

ಮೊದಲನೆಯದಾಗಿ, ಚಾರಿತ್ರ್ಯದಲ್ಲಿ ನಾವು ಸ್ವಲ್ಪ ಉನ್ನತ ಮಟ್ಟಕ್ಕೆ ಏರಬೇಕಾಗಿದೆ. ಚಾರಿತ್ರ್ಯ ಮತ್ತು ಧಾರ್ಮಿಕವಾಗಿ ನಾವು ಸ್ವಲ್ಪ ಉನ್ನತ ಮಟ್ಟಕ್ಕೇರಬೇಕು. ಮುಸ್ಲಿಮರು ಸುಳ್ಳಾಡುವುದಿಲ್ಲ, ದ್ರೋಹವೆಸಗುವುದಿಲ್ಲ, ಲಂಚ ಪಡೆಯುವುದಿಲ್ಲ ಎಂಬ ರೀತಿಯಲ್ಲಿ ಜನರ ಮುಂದೆ ನಮ್ಮ ವ್ಯಕ್ತಿ ಚಿತ್ರವು ಪ್ರಕಟಗೊಳ್ಳಬೇಕು. ಈ ಚಿತ್ರವನ್ನು ರೂಪಿಸಲಿಕ್ಕಾಗಿ ಮೋದಿ ಆಡಳಿತವು ಅಡೆತಡೆಯನ್ನು ಉಂಟು ಮಾಡದು. ಈ ಚಾರಿತ್ರ್ಯದ ಉನ್ನತ ಮಟ್ಟಕ್ಕೆ ಬೆಳೆಯುವುದಕ್ಕಿಂತ ಹೊರತಾಗಿ ಇನ್ನೊಂದು ದಾರಿಯಿಲ್ಲ.

ಪ್ರವಾದಿಯವರ(ಸ) ಕಾಲದಲ್ಲಿ ಮಾತಾಪಿತರೊಂದಿಗೆ ಉತ್ತಮ ವರ್ತನೆ ತೋರಬೇಕು ಎಂಬ ಕುರ್‌ಆನ್ ಸೂಕ್ತವು ಅವತೀರ್ಣಗೊಂಡಾಗ ಇದನ್ನು ಆಕ್ಷೇಪಿಸಲಿಲ್ಲ. ಇವರ ಹೊರತಾಗಿಯೂ ಮುಸ್ಲಿಮರನ್ನು ಮನೆಯಿಂದ ಹೊರಗೆ ಅಟ್ಟಲಾಗುತ್ತಿತ್ತು. ಅಕ್ರಮ ಮತ್ತು ದೌರ್ಜನ್ಯವು ಮೇರೆ ಮೀರಿತ್ತು. ಆದರೆ ಮುಸ್ಲಿಮರು ತಮ್ಮ ತಂದೆ-ತಾಯಿಗಳಿಗೆ ಗೌರವ ತೋರಲಿಲ್ಲವೆಂದು ಯಾವೊಬ್ಬ ಸತ್ಯ ನಿಷೇಧಿಯೂ ಆಕ್ಷೇಪಿಸಲಿಲ್ಲ. ಇಂತಹ ಚಾರಿತ್ರ್ಯವನ್ನು ರೂಪಿಸಲು ಇಂದು ನಮ್ಮಿಂದ ಸಾಧ್ಯವಿಲ್ಲವೇ? ಚಾರಿತ್ರ್ಯದ ಉನ್ನತಿಯು ನಿಮ್ಮ ವ್ಯಕ್ತಿ ಚಿತ್ರಣವನ್ನು ಬದಲಿಸಬಹುದು.

ಪ್ರವಾದಿಯವರು(ಸ) ಹಿಜ್ರತ್‌ನ ವೇಳೆ ಸತ್ಯ ನಿಷೇಧಿಗಳ ಅಮಾನತ್‌ಗಳನ್ನು ಮರಳಿಸಿದರು. ಅಂದರೆ ವೈರತ್ವದ ಹೊರತಾಗಿಯೂ ಪ್ರವಾದಿಯವರನ್ನು(ಸ) ಸತ್ಯಸಂಧರೆಂದು ಪರಿಗಣಿಸಲಾಗುತ್ತಿತ್ತು. ಸೊತ್ತು(ಅಮಾನತ್)ಗಳನ್ನು ಅವರ ಬಳಿ ಇಡಲಾಗುತ್ತಿತ್ತು. ಇಂತಹ ಚಾರಿತ್ರ್ಯ ನಮ್ಮದಾಗ ಬೇಕಾಗಿದೆ. 20 ಕೋಟಿಯಷ್ಟಿರುವ ಜನಸಂಖ್ಯೆಯಲ್ಲಿ 20 ಲಕ್ಷ ಜನರ ಚಾರಿತ್ರ್ಯವು ಉನ್ನತಗೊಂಡರೆ ಪರಿಸ್ಥಿತಿ ಬದಲಾಗಬಹುದು.

ಒಂದು ಕಾಲವಿತ್ತು ಆಗ ನ್ಯಾಯಾಧೀಶರು ಕೂಡಾ ಹೇಳುತ್ತಿದ್ದರು, “ಒಂದು ವೇಳೆ, ಆ ಮುಸ್ಲಿಮ್ ವ್ಯಕ್ತಿ ಸಾಕ್ಷ್ಯ ನುಡಿದರೆ ನಾನು ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ” ಎಂದು. ಈ ಮಟ್ಟಕ್ಕೆ ನಾವು ನಮ್ಮನ್ನು ಬೆಳೆಸಬೇಕಾಗಿದೆ. ಅಬ್ದುಲ್ ಕಲಾಮ್, ಡಾ. ಕಿದ್ವಾಯಿಯಂತಹ ವ್ಯಕ್ತಿಗಳನ್ನು ತಯಾರಿಸದಿದ್ದರೆ ಹಾಗೂ ರಾಷ್ಟ್ರದ ಅವಶ್ಯಕತೆಯಾಗಿ ನಮ್ಮನ್ನು ನಾವು ಮಾರ್ಪಡಿಸದಿದ್ದರೆ, ಪರಿಸ್ಥಿತಿಯು ಬದಲಾಗುವುದಿಲ್ಲ. ಆದ್ದರಿಂದ ಯುವಕರನ್ನು ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮುನ್ನಡೆಸಬೇಕು. ಇದರೊಂದಿಗೆ ಚಾರಿತ್ರ್ಯದಲ್ಲಿಯೂ ಉನ್ನತಗೊಳಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ತಜ್ಞರನ್ನು ತಯಾರಿಸಬೇಕು.

ವಿಜ್ಞಾನ, ತತ್ವಜ್ಞಾನ, ತಂತ್ರಜ್ಞಾನದಲ್ಲಿ ನಾಯಕತ್ವದ ಕೊರತೆಯನ್ನು ಹೇಳಲಾಗುತ್ತದೆ. ರಾಷ್ಟ್ರದಲ್ಲಿ ಮುಸ್ಲಿಮ್ ಪ್ರಭಾವಿ ರಾಜಕೀಯ ನಾಯಕನಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಮುಸ್ಲಿಮರು ಒಗ್ಗಟ್ಟಾದರೆ ಇದು ಸಾಧ್ಯವಿದೆ. ಧಾರ್ಮಿಕ ವಿಷಯದಲ್ಲಿ ನಮ್ಮ ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿರಬಹುದು. ಹಾಗಂತ! ಒಂದೇ ಅಭಿಪ್ರಾಯ ಸರಿ ಎನ್ನುವಂತಿಲ್ಲ. ಹೆಚ್ಚೆಂದರೆ ನಮ್ಮ ಪುರಾವೆ ಪ್ರಬಲವಾಗಿದ್ದರೆ ಇತರರದ್ದು ದುರ್ಬಲವಾಗಿದೆ ಎಂದು ಹೇಳಬಹುದಷ್ಟೇ. ಆದರೆ ಯಾರ ಅಭಿಪ್ರಾಯವೂ ಪುರಾವೆ ರಹಿತವಾಗಿರುವುದಿಲ್ಲ.

ಮಹಿಳೆಯರನ್ನು ನಿರ್ಲಕ್ಷಿಸುವ ಮಾತು ಬಂತು, ಅದು ಸರಿ. ಒಂದು ವೇಳೆ ಮಹಿಳೆಯರು ಮಸೀದಿಗೆ ಹೋಗಲು ಅನುಮತಿಯನ್ನು ಕೇಳಿದರೆ ಅವರನ್ನು ತಡೆಯಬಾರದು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ಜಮಾಅತೆ ಇಸ್ಲಾಮಿಯಿಂದ ತನ್ನ ಮಸೀದಿಗಳಲ್ಲಿ ಇದರ ಅವಕಾಶಗಳನ್ನು ಒದಗಿಸುತ್ತಿದೆ ಮತ್ತು ಇತರರು ಕೂಡಾ ಇದನ್ನು ಮಾಡುತ್ತಿದ್ದಾರೆ. ಈಗ ಮುಸ್ಲಿಮ್ ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಗಂಡು ಮಕ್ಕಳಿಗಿಂತ ಮುಂದಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದೇ ನೆಂದರೆ, ಶಿಕ್ಷಣ, ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ವಿಶೇಷವಾಗಿ ಚಾರಿತ್ರ್ಯದಲ್ಲಿ ನಾವು ಉನ್ನತರಾಗಬೇಕಾಗಿದೆ. ನಮ್ಮಲ್ಲಿ ಒಗ್ಗಟ್ಟು ಮೂಡಬೇಕಾಗಿದೆ. ಉಹುದ್ ಯುದ್ಧದಲ್ಲಿ ಪರಾಭವಗೊಂಡು ನಿರಾಶರಾದ ಮುಸ್ಲಿಮರನ್ನುದ್ದೇಶಿಸಿ ಅಲ್ಲಾಹನು ಹೇಳಿದನು, “ಈ ಹಿಂದೆ ನಿಮ್ಮ ವೈರಿ ಪರಾಭವಗೊಂಡು ನಿರಾಶರಾಗಲಿಲ್ಲ. ನಿಮ್ಮನ್ನು ಎದುರಿಸಲು ಪುನಃ ಯುದ್ಧ ರಣಾಂಗಣಕ್ಕೆ ಸಿದ್ಧರಾದರು. ನೀವೇಕೆ ನಿರಾಶರಾಗುತ್ತೀರಿ?

ಆಡಳಿತ ಬದಲಾವಣೆಗೊಂಡರೆ ಪರಿಸ್ಥಿತಿಯು ಬದಲಾಗುವುದಿಲ್ಲ. ಇದಕ್ಕಾಗಿ ನಮ್ಮನ್ನು ನಾವು ಬದಲಿಸಬೇಕು. ನಾವು ಸ್ವತಃ ಚಾರಿತ್ರ್ಯ ಹಾಗೂ ನಡತೆಯಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾಗಿದೆ. ಮುಸ್ಲಿಮನು ಯಾವುದೇ ಕೆಟ್ಟ ಕಾರ್ಯ ಎಸಗುವುದಿಲ್ಲ ಎಂಬ ಸಂದೇಶವನ್ನು ನಮ್ಮ ಚಾರಿತ್ರ್ಯದ ಮೂಲಕ ಜಗತ್ತಿಗೆ ತಿಳಿಸಬೇಕಾಗಿದೆ. ಇಡೀ ಮುಸ್ಲಿಮ್ ಸಮುದಾಯವು ಚಾರಿತ್ರ್ಯದಲ್ಲಿ ಹೀಗಾಗದು ಎಂದು ಒಪ್ಪಿಕೊಳ್ಳೋಣ. ಆದರೆ ಒಂದು ಗಣನೀಯ ಸಂಖ್ಯೆ ಹೀಗಾಗಬೇಕಾಗಿದೆ. ಒಂದು ವೇಳೆ ಒಬ್ಬ ಮುಸ್ಲಿಮೇತರನು ಮುಸ್ಲಿಮನ ಕುರಿತು ಆಕ್ಷೇಪಿಸಿದರೆ ಮತ್ತೊಬ್ಬನು ನನ್ನ ಮುಸ್ಲಿಮ್ ನೆರೆಹೊರೆಯವನು ಅಥವಾ ಸ್ನೇಹಿತನು ಹೀಗಿಲ್ಲ ಎಂದು ಹೇಳಬೇಕು. ಇಂತಹ ವ್ಯಕ್ತಿತ್ವವು ನಮ್ಮದಾಗಬೇಕು. ಧಾರ್ಮಿಕ ನೆಲೆಯಲ್ಲಿ ನಮ್ಮ ಸಂಬಂಧಗಳು ಇನ್ನಷ್ಟು ಬೆಳೆಯಬೇಕಾಗಿದೆ. ವ್ಯಾವಹಾರಿಕ ಮತ್ತು ಔದ್ಯೋಗಿಕ ಸಂಬಂಧಗಳು ಇದ್ದೇ ಇವೆ. ಈ ಸಮುದಾಯವನ್ನು ಉನ್ನತಗೊಳಿಸಲು ಸಾಧ್ಯವಿರುವ ಕಾರ್ಯ ಯೋಜನೆಗಳನ್ನು ನಾವು ರೂಪಿಸಬೇಕಾಗಿದೆ.

(ನಿರೂಪಣೆ: ರಿಯಾಝ್ ರೋಣ)

LEAVE A REPLY

Please enter your comment!
Please enter your name here