ಕ್ಷಮಿಸಿರಿ, ಮನ್ನಿಸಿರಿ – ಕುರ್ ಆನ್ ಕಲಿಸುವ ಪಾಠ

0
395

ಸನ್ಮಾರ್ಗ ವಾರ್ತೆ

ನಿಷ್ಕಳಂಕ ಹೃದಯವು ಸತ್ಯವಿಶ್ವಾಸದ ಮೂಲ ಬೇಡಿಕೆಯಾಗಿದೆ. ಇದು ಇಹಪರ ಜೀವನದ ವಿಜಯದ ಅಡಿಪಾಯವಾಗಿದೆ. ಅನ್ಯಾಯ, ದ್ವೇಷ, ಕೋಪ, ಅತ್ಯಾಸೆ, ದುಃಖ, ಅಸೂಯೆ, ಪಾಪ, ಹಗೆತನದಂತಹ ಚಿಂತನೆ ಮತ್ತು ಭಾವನೆಗಳು ಮನುಷ್ಯನ ಮನಃಸ್ಥಿತಿಯಲ್ಲಿರುವುದು ಸಹಜವಾಗಿದೆ. ಆದರೆ ಅವೆಲ್ಲವನ್ನೂ ನಿಯಂತ್ರಿಸುವುದು ಸತ್ಯವಿಶ್ವಾಸದ ಲಕ್ಷಣವಾಗಿದೆ. ಸಮಾಜದಲ್ಲಿ ನಾವು ಹಲವಾರು ರೀತಿಯ ಸಂಸ್ಕೃತಿ, ಸ್ವಭಾವ, ಚಾರಿತ್ರ್ಯ, ಹವ್ಯಾಸ, ವರ್ತನೆ, ಮನೋಭಾವ, ಅಭಿಪ್ರಾಯವಿರುವ ಸಹಜೀವಿಗಳೊಂದಿಗೆ ದಿನನಿತ್ಯ ವಾಸಿಸಬೇಕಾಗಿದೆ.

ಪವಿತ್ರ ಕುರ್ ಆನ್ ನಲ್ಲಿ ಕ್ಷಮೆಯ ಹಲವಾರು ಚಾರಿತ್ರಿಕ ಘಟನೆಗಳ ಮತ್ತು ಅತ್ಯುತ್ತಮ ಕಥೆಗಳ ಉದಾಹರಣೆಗಳನ್ನು ಕಾಣಬಹುದಾಗಿದೆ. ಅದರಲ್ಲಿ ಯೂಸುಫ್(ಅ) ಚರಿತ್ರೆಯು ಅತ್ಯುತ್ತಮ ಪಾಠವನ್ನು ಕಲಿಸುತ್ತದೆ. ಅವರು ತಮ್ಮ ಸಹೋದರರೊಂದಿಗೆ ಯಾವುದೇ ಪ್ರತೀಕಾರ ತೀರಿಸಲಿಲ್ಲ. ಒಡಹುಟ್ಟಿದ ಸಹೋದರರು ಯೂಸುಫ್ (ಅ)ರನ್ನು ಬಾವಿಗೆ ಹಾಕಿದರು, ಅವರ ತಂದೆಯಲ್ಲಿ ಯೂಸುಫ್(ಅ)ರನ್ನು ತೋಳವು ತಿಂದು ಬಿಟ್ಟಿತು ಎಂದು ಸುಳ್ಳು ಹೇಳಿದ್ದರು. ಆದರೆ ಯೂಸುಫ್(ಅ) “ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆಯೂ ಇಲ್ಲ. ಅಲ್ಲಾಹ್ ನಿಮ್ಮನ್ನು ಕ್ಷಮಿಸಲಿ.” ಎಂದು ಹೇಳಿದರು. ಮಹಾ ಅಪರಾಧವನ್ನು ಎಸಗಿದ ತನ್ನ ಸಹೋದರರೊಂದಿಗೆ ಕೆಟ್ಟದಾಗಿ ವರ್ತಿಸದೆ, ನಿಂದಿಸದೆ, ಅವಮಾನಿಸದೆ “ಶೈತಾನನು ನನ್ನ ಮತ್ತು ನನ್ನ ಸಹೋದರರ ನಡುವೆ ಪಿತೂರಿಯನ್ನುಂಟು ಮಾಡಿಬಿಟ್ಟನು.” ಎಂದು ಹೇಳುತ್ತಾರೆ.

ಪ್ರವಾದಿ ಮುಹಮ್ಮದ್(ಸ) ರ ಜೀವನದಲ್ಲಿ ನಡೆದಂತಹ ಹಲವಾರು ಘಟನೆಗಳಲ್ಲಿ ಕೂಡಾ ಅವರು ಕ್ಷಮಿಸಿದಂತಹ ಉದಾಹರಣೆಯನ್ನು ಕಾಣಬಹುದಾಗಿದೆ. ಅವರ ವಿರುದ್ಧ ಸುಳ್ಳು ಪ್ರಚಾರ, ಅನ್ಯಾಯವಾದಗಲೂ ಶತ್ರುಗಳಗಳನ್ನು ಕ್ಷಮಿಸುತ್ತಿದ್ದರು. ಅವರು ತಮ್ಮ ಶತ್ರುಗಳ ಸನ್ಮಾರ್ಗಕ್ಕಾಗಿ ಪ್ರಾರ್ಥಿಸುತ್ತಿದ್ದರು. ಕಿರುಕುಳ ನೀಡುತ್ತಿದ್ದವರ ಹೃದಯವನ್ನು ಮೃದುಗೊಳಿಸಲು ಪ್ರಾರ್ಥಿಸುತ್ತಿದ್ದರು. ಮಕ್ಕಾ ವಿಜಯದ ದಿನ ಸತ್ಯವಿಶ್ವಾಸಿಗಳಿಗೆ ಕಿರಿಕುಳ ನೀಡಿದ ಎಲ್ಲರಿಗೂ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಿದರು.

ಆಯಿಶಾ(ರ)ರೊಡನೆ ಅಲ್ಲಾಹನ ಸಂದೇಶವಾಹಕರ ಚಾರಿತ್ರ್ಯದ ಬಗ್ಗೆ ವಿಚಾರಿಸಿದಾಗ ಅವರು ಹೀಗೆಂದರು: “ಪ್ರವಾದಿವರ್ಯರು(ಸ) ಅಶ್ಲೀಲ ಮಾತುಗಳನ್ನಾಡುವವರಾಗಿರಲಿಲ್ಲ. ಅವರು ಬಯ್ಯುವವರಾಗಿರಲಿಲ್ಲ. ಅವರು ಪೇಟೆಯಲ್ಲಿ ಅರಚಾಟ ನಡೆಸುತ್ತಿರಲಿಲ್ಲ ಮತ್ತು ಅವರು ಕೆಡುಕಿಗೆ ಕೆಡುಕಿನಿಂದ ಉತ್ತರಿಸುತ್ತಿರಲಿಲ್ಲ. ಬದಲಾಗಿ ಅವರು ಕ್ಷಮಿಸುತ್ತಿದ್ದರು ಮತ್ತು (ಇತರರ ತಪ್ಪುಗಳನ್ನು) ನಿರ್ಲಕ್ಷಿಸುತ್ತಿದ್ದರು.” (ತಿರ್ಮಿದಿ)

ಯಾರಾದರೂ ನಿಮ್ಮೊಂದಿಗೆ ಜಗಳಾಡಿದರೆ, ಕೆಟ್ಟದಾಗಿ ವರ್ತಿಸಿದರೆ, ನಿಂದಿಸಿದರೆ, ಅವಮಾನಿಸಿದರೆ, ನಿಮ್ಮ ಬಗ್ಗೆ ಕೆಟ್ಟ ವದಂತಿಯನ್ನು ಹರಡಿದ್ದರೆ, ಸುಳ್ಳಾರೋಪ ಹೊರಿಸಿದರೆ, ಕೋಪಗೊಳ್ಳುವಂತೆ ಮಾಡಿದರೆ ಮೌನ ಪಾಲಿಸಿರಿ.

ಶಾಂತವಾಗಿರಿ. ವಿಶ್ರಾಂತಿ ಪಡೆಯಿರಿ. ನಮ್ಮ ಚಿಂತನೆಗಳು ಮತ್ತು ಆಲೋಚನೆಗಳು ಇತರರಿಗೆ ಬೆಳಕು ತೋರುವಂತಾಗಿರಬೇಕು. ಜ್ಞಾನದ ಕೊರತೆಯು ಸಂಬಂಧಗಳನ್ನು ಕೆಡಿಸುತ್ತದೆ. ಯಾರಾದರೂ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ ನ್ಯಾಯಕ್ಕಾಗಿ ಕಾಯಬೇಡಿರಿ. ಅಲ್ಲಾಹನ ಮೇಲೆ ಭರವಸೆಯಿಟ್ಟು ಬಿಟ್ಟು ಬಿಡಿರಿ. ನಿಮ್ಮ ಪ್ರತಿಕ್ರಿಯೆಯು ನ್ಯಾಯವಾಗಿದೆಯೇ ಎಂದು ಪರಿಶೀಲಿಸಿರಿ. ಇನ್ನೊಬ್ಬರ ಕೆಟ್ಟ ವರ್ತನೆಯು ನಿಮ್ಮ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳುವಂತೆ ಮಾಡದಿರಲಿ.

ಪತಿ ಪತ್ನಿಯರ ನಡುವೆ ಉತ್ತಮ ಸಂಬಂಧಕ್ಕಾಗಿ ಕ್ಷಮೆಯು ಅತೀ ಅಗತ್ಯವಾಗಿದೆ. ವಿವಾಹ ವಿಚ್ಛೇದನ ವ್ಯಾಪಕವಾಗುತ್ತಿರುವ ಈ ಕಾಲದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಪರಸ್ಪರ ಕ್ಷಮಿಸಿ, ಮನ್ನಿಸಿ, ಪುನಃ ಇನ್ನೊಂದು ಅವಕಾಶವನ್ನು ನೀಡಬೇಕು. ಕ್ಷಮೆಯ ನಂತರ ಶಾಂತಿ ಹಾಗೂ ಸಾಮರಸ್ಯ ಅಗತ್ಯವಾಗಿದೆ.

ನಿಮ್ಮ ಮನಸ್ಸಿನಲ್ಲಿ ಹಗೆತನ, ಶತ್ರುತ್ವವನ್ನಿರಿಸಿದರೆ ಇನ್ನೊಬ್ಬರಿಗೆ ನೀವು ನಿಮ್ಮನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತೀರಿ. ನಿಮ್ಮ ಒಳಿತಿಗಿಗಾಗಿ ನಿಮ್ಮ ಹೃದಯವನ್ನು ಉತ್ತಮಗೊಳಿಸಬೇಕು. ಕೆಟ್ಟ, ಅಹಿತಕರ ಘಟನೆಗಳನ್ನು ನಿಮ್ಮ ಸ್ಮರಣೆಯಲ್ಲಿಡಬೇಡಿರಿ ಮತ್ತು ಸ್ಮರಿಸುತ್ತಿರಬೇಡಿರಿ. ನೀವು ಉತ್ತಮ ಮಾದರಿಯಾಗಿರಿ. ಸಮಾಜ ನಿಮ್ಮನ್ನು ಸದಾ ನೋಡುತ್ತಿರುತ್ತದೆ. ನಿಮ್ಮ ಒಳಿತಿನ ವರ್ತನೆಯಿಂದ ಪ್ರಭಾವಿತರಾಗುವ ಜನರಿರಬಹುದು. ಜನರಿಂದ ನಿಮಗೆ ಪ್ರೀತಿ, ಗೌರವ, ವಿಶ್ವಾಸ ಸಿಗಬಹುದು. ಮಾತನಾಡುವಾಗ ಕುಟುಂಬದವರನ್ನು ತೆಗಳುವ, ಬೈಯುವಂತಹ ಕೆಟ್ಟ ಅಭ್ಯಾಸದಿಂದ ದೂರವಿರಬೇಕು.

“ಮತ್ತು ಜನರು ಆಡುತ್ತಿರುವ ಮಾತುಗಳ ಬಗ್ಗೆ ತಾಳ್ಮೆ ವಹಿಸಿರಿ ಮತ್ತು ಸಭ್ಯ ರೀತಿಯಲ್ಲಿ ಅವರಿಂದ ಬೇರ್ಪಡಿರಿ.” (ಪವಿತ್ರ ಕುರ್ ಆನ್ 73: 10)

ಜಗಳ ಮತ್ತು ನಿರರ್ಥಕ ವಿಷಯಗಳಿಂದ ದೂರವಿರಿ, ಕೋಪಗೊಳ್ಳಬೇಡಿರಿ, ಅಸಭ್ಯ ವರ್ತನೆಗೆ ಉತ್ತರ ನೀಡಬೇಡಿರಿ. ಕೆಲವೊಮ್ಮೆ ಕೆಲವು ಕ್ಷುಲ್ಲಕ ಮಾತುಗಳು ಸಾವಿರ ಸಮಸ್ಯೆಯನ್ನು ಉಂಟು ಮಾಡುತ್ತದೆ ಮತ್ತು ಅರ್ಥಗರ್ಭಿತವಾದ ಮೌನವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇನ್ನೊಬ್ಬರ ಕೆಟ್ಟ ಮಾತು, ವರ್ತನೆಗೆ ನಾವು ಜವಾಬ್ದಾರರಲ್ಲ. ಸಂಪತ್ತು, ಉತ್ತಮ ಉದ್ಯೋಗ, ವ್ಯಾಪಾರ, ಧಾರ್ಮಿಕ ಜ್ಞಾನವಿರುವ ಸಂಬಂಧಿಕರೊಂದಿಗೆ ಅಸೂಯೆಯಿರುವುದು ಸಾಮಾನ್ಯವಾಗಿದೆ. ಈ ಅಸೂಯೆಯು ಅವರನ್ನು ಕಿರುಕುಳ ನೀಡುವಂತೆ ಮಾಡುತ್ತದೆ. ಸಂಬಂಧಿಕರಿಗೆ ಏನಾದರೂ ನೀಡುತ್ತಿದ್ದರೆ, ಉಪಕಾರ ಮಾಡುತ್ತಿದ್ದರೆ ಅವರು ನಿಮ್ಮೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವರು. ಸಂಬಂಧಿಕರನ್ನು ನಿರ್ಲಕ್ಷಿಸಿದಾಗ ಕಿರುಕುಳ ನೀಡುವ ಸಾಧ್ಯತೆ ಇದೆ.

ಅಲ್ಲಾಹನು ಪ್ರತಿಯೊಬ್ಬರನ್ನೂ ಬೇರೆ ಬೇರೆ ರೀತಿಯಲ್ಲಿ ಪರೀಕ್ಷಿಸುತ್ತಾನೆ. ಕೆಲವರನ್ನು ನಿಂದಿಸುವ ಜನರ ಮೂಲಕ ಪರೀಕ್ಷಿಸುತ್ತಾನೆ. ಕೆಲವೊಂದು ಘಟನೆಗಳ ಮೂಲಕ ಪರೀಕ್ಷಿಸಿ ಅಲ್ಲಾಹನು ಸ್ಥಾನಮಾನವನ್ನು ಉನ್ನತಗೊಳಿಸುತ್ತಾನೆ. ನಿಮಗೆ ಇಷ್ಟವಿಲ್ಲದಂತಹ, ಸುಳ್ಳು, ಅನ್ಯಾಯ, ಕೆಟ್ಟ ಹಾಗೂ ಮನನೋಯುವ ಮಾತನ್ನು ಕೇಳಬೇಕಾದಂತಹ ಪರಿಸ್ಥಿತಿ ಬರಬಹುದು. ಕೆಲವರಿಗೆ ಅದು ಅವರ ಜೀವನಾದ್ಯಂತ ಕಾಡುತ್ತಿರುತ್ತದೆ. ಸಂಬಂಧಗಳನ್ನು ಕೆಡಿಸುತ್ತದೆ. ಅದೇ ನೋವಿನಿಂದ, ಸಂಕಟದಿಂದ ಜೀವಿಸುತ್ತೀರೋ ಅಥವಾ ಪ್ರತೀಕಾರ ತೀರಿಸುತ್ತೀರೋ ಅಥವಾ ಕ್ಷಮಿಸಿ ಬಿಡುತ್ತೀರೋ ಎಂಬುದು ನಿಮ್ಮ ಕೈಯಲ್ಲಿದೆ. ಅಲ್ಲಾಹ್ ನಿಮ್ಮೊಂದಿಗೆ ಯಾವ ರೀತಿ ವರ್ತಿಸಬೇಕೆಂದು ನಿರೀಕ್ಷಿಸುತ್ತೀರೋ ಅದೇ ರೀತಿ ನೀವು ಜನರೊಂದಿಗೆ ವರ್ತಿಸಿರಿ. ಜನರು ನಿಮ್ಮೊಂದಿಗೆ ಯಾವ ರೀತಿ ವರ್ತಿಸುತ್ತಾರೆ, ಜನರು ಏನು ಹೇಳುತ್ತಾರೆಂಬುದರ ಕುರಿತು ಚಿಂತಿಸಬೇಡಿರಿ.

“ಅವರನ್ನು ಕ್ಷಮಿಸಿ ಬಿಡಬೇಕು ಮತ್ತು ಮನ್ನಿಸಬೇಕು. ಅಲ್ಲಾಹ್ ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ?” (ಪವಿತ್ರ ಕುರ್ ಆನ್ 24: 22)

✍️ಖದೀಜ ನುಸ್ರತ್