ಬಟ್ಟೆ ಧರಿಸಿಯೂ ನಗ್ನರಾಗುತ್ತಿರುವ ಸ್ತ್ರೀಯರು

0
2071

ಖದೀಜ ನುಸ್ರತ್, ಅಬು ಧಾಬಿ

ಇಸ್ಲಾಂ ಧರ್ಮವು ಒಂದು ಸಂಪೂರ್ಣ ಜೀವನ ಪದ್ದತಿಯಾಗಿದೆ. ಇಹಲೋಕದಲ್ಲಿ ಒಂದು ಉತ್ತಮ ಸಮುದಾಯವನ್ನು ಮುನ್ನಡೆಸಲು ಜೀವನದ ಪ್ರತಿಯೊಂದು ರಂಗಗಳಲ್ಲಿ ಸೃಷ್ಟಿಕರ್ತನು ವಿವಿಧ ರೀತಿಯ ಆದೇಶಗಳನ್ನು ನೀಡಿದ್ದಾನೆ. ಅವುಗಳಲ್ಲಿ ಸ್ತ್ರಿಯರ ವಸ್ತ್ರಧಾರಣೆಯ ಬಗ್ಗೆ ನೀಡಿದ ಆದೇಶವು ಗಮನಾರ್ಹವಾಗಿದೆ. ಇಂದು ಸಮಾಜದಲ್ಲಿ ಸ್ತ್ರಿಯರಿಗೆ ಭದ್ರತೆ ಇಲ್ಲದಂತಹ ವಾತಾವರಣ ಉಂಟಾಗಳು ಕಾರಣ ಸರಿಯಾಗಿ ಮೈಮುಚ್ಚುವ ವಸ್ತ್ರ ಧರಿಸದೇ ಇರುವುದಾಗಿದೆ.

ಲಜ್ಜೆಯೆಂಬುದು ಪ್ರತಿಯೊಬ್ಬ ಮಾನವನ ಪ್ರಕೃತಿಯಲ್ಲಿರಬೇಕಾದ ಗುಣವಾಗಿದೆ. ಉತ್ತಮ ವಸ್ತ್ರಧಾರಣೆಯ ಉದ್ದೇಶವು ಸ್ತ್ರೀ ಪುರುಷರ ಮಧ್ಯೆ ತಡೆಗೋಡೆ ನಿರ್ಮಿಸಿ ಸಮಾಜದಲ್ಲಿ ಲಜ್ಜಾಪೂರ್ಣ ವಾದ ವಾತಾವರಣ ಮತ್ತು ಉತ್ತಮ ನಡವಳಿಕೆಯನ್ನುಂಟು ಮಾಡುತ್ತಾ ಘನತೆ ಗೌರವದೊಂದಿಗೆ ಜೀವಿಸುವುದಾಗಿದೆ. ಉಡುಪಿನ ಉದ್ದೇಶವು ಶೀತೋಷ್ಣಗಳಿಂದ ರಕ್ಷಿಸುವುದು ಮಾತ್ರವಲ್ಲ. ಉಡುಪು ಮಾನವನನ್ನು ದೇವನಿಷ್ಠೆಯ ಉನ್ನತ ಚಾರಿತ್ರ್ಯಕ್ಕೆ ತಲುಪಿಸುವಂತಾಗಿರಬೇಕು. ಒಬ್ಬರ ವಸ್ತ್ರಶೈಲಿಯು ಲಜ್ಜೆ ಮತ್ತು ಉತ್ತಮ ಸಂಸ್ಕೃತಿಯ ಪ್ರತೀಕವಾಗಿರಬೇಕು. ಆರಂಭಿಕ ಕಾಲದಲ್ಲಿ ಮನುಷ್ಯನು ಬಹುತೇಕ ಬೆತ್ತಲೆಯಾಗಿದ್ದನು, ಮತ್ತು ಅವನ ಬುದ್ಧಿಶಕ್ತಿ ವಿಕಸನಗೊಂಡಾಗ ಅವರು ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಮಾನವನು ಸಂಪೂರ್ಣವಾಗಿ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸುವುದರಿಂದ ಮನುಷ್ಯ ನಾಗರಿಕತೆಯ ಉನ್ನತ ಮಟ್ಟವನ್ನು ಪ್ರತಿನಿಧಿಸುತ್ತಾರೆ ಮತ್ತು ದೇಹದ ಎಲ್ಲಾ ಭಾಗಗಳನ್ನು ತೋರಿಸುತ್ತಾ ಕನಿಷ್ಠ ಬಟ್ಟೆಗಳನ್ನು ಧರಿಸುವುದು ಪ್ರಾಚೀನ ಕಾಲದ ಅನಾಗರಿಕತೆಯ ಲಕ್ಷಣವಾಗಿತ್ತು.

“ಓ ಆದಮನ ಸಂತತಿಯೇ, ನಾವು ನಿಮ್ಮ ದೇಹದ ಲಜ್ಜಾಭಾಗಗಳನ್ನು ಮರೆಸಲಿಕ್ಕಾಗಿಯೂ ನಿಮ್ಮ ದೇಹದ ರಕ್ಷಣೆ ಹಾಗೂ ಅಲಂಕಾರದ ಸಾಧನವಾಗಿಯೂ ನಿಮಗೆ ಉಡುಪನ್ನು ಇಳಿಸಿರುತ್ತೇವೆ. ‘ಧರ್ಮನಿಷ್ಠೆ'(ತಕ್ವಾ)ಯು ಅತ್ಯುತ್ತಮ ಉಡುಪಾಗಿರುತ್ತದೆ. ಇದು ಅಲ್ಲಾಹನ ಕುರುಹುಗಳಲ್ಲೊಂದಾಗಿದೆ. ಜನರು ಇದರಿಂದ ಪಾಠ ಪಡೆಯಲೂಬಹುದು.

ಓ ಆದಮರ ಸಂತತಿಯೇ, ಶೈತಾನನು ನಿಮ್ಮ ಮಾತಾಪಿತರನ್ನು ಸ್ವರ್ಗದಿಂದ ತೊಲಗಿಸಿದ್ದ ಹಾಗೂ ಪರಸ್ಪರರ ಲಜ್ಜಾಂಗಗಳು ಗೋಚರಿಸುವಂತೆ ಅವರ ಉಡುಪನ್ನು ಅವರ ಮೇಲಿಂದ ಕಳಚಿದ್ದ ಹಾಗೆಯೇ ನಿಮ್ಮನ್ನು ‘ಪರೀಕ್ಷೆ’ಗೆ ಒಳಪಡಿಸದಿರಲಿ.” (ಅಲ್ ಅ’ಅರಾಫ್ 26- 27)

ಸ್ತ್ರೀಯರ ವಸ್ತ್ರಧಾರಣೆ ವಿವಿಧ ಸಂದರ್ಭಗಳಲ್ಲಿ ಸ್ತ್ರೀಯ ಮಟ್ಟಿಗೆ ಮತ್ತು ಪುರುಷರ ಮಟ್ಟಿಗೆ ಬೇರೆ ಬೇರೆ ರೀತಿಯಾಗಿರುತ್ತದೆ. ಸ್ತ್ರೀಗೆ ಪತಿಯ ಮುಂದೆ ವಸ್ತ್ರಧಾರಣೆಗೆ ಯಾವುದೇ ನಿಬಂಧನೆಯಿಲ್ಲ. ಪತಿಗೆ ಇಷ್ಟವಿರುವಂತಹ ಆಕರ್ಷಣೀಯವಾದ ಯಾವುದೇ ವಸ್ತ್ರಗಳನ್ನು ಧರಿಸಬಹುದು. ಸ್ತ್ರೀಯು ಪರಪುರುಷರ ಮುಂದೆ ಮುಖ ಮತ್ತು ಮುಂಗೈಗಳ ಹೊರತು ದೇಹವನ್ನು ಸಂಪೂರ್ಣವಾಗಿ ಮುಚ್ಚಬೇಕು. ಪತಿಯ ಹೊರತು ತಂದೆ ಮತ್ತು ಸಹೋದರನೂ ಸೇರಿದಂತೆ ಯಾರ ಮುಂದೆಯೂ ತೋರಿಸಬಾರದು. ಆದರೆ ಕೆಲವು ಅಭಿಪ್ರಾಯಗಳ ಪ್ರಕಾರ ಸ್ತ್ರೀಯು ವಿವಾಹ ನಿಷಿದ್ಧ ಸಂಬಂಧಿಕರ ಮುಂದೆ ತಲೆ, ಕೈ, ಕುತ್ತಿಗೆ ಕಡ್ಡಾಯವಾಗಿ ಮರೆಸಬೇಕೆಂದಿಲ್ಲ. ಕೆಲವೊಮ್ಮೆ ಮನೆಕೆಲಸ ಮಾಡುವಾಗ ಅದನ್ನು ಮರೆಸುವುದು ಕಷ್ಟ ಮತ್ತು ಅಲ್ಲಿ ಯಾವುದೇ ಕ್ಷೋಭೆಗೆ ಅವಕಾಶವಿರುವುದಿಲ್ಲ .ಸಾಧ್ಯವಾದರೆ ಮರೆಸುವುದೇ ಉತ್ತಮ. ಏಕೆಂದರೆ ಲಜ್ಜೆಯು ಸತ್ಯ ವಿಶ್ವಾಸದ ಭಾಗವಾಗಿದೆ.

ಇಸ್ಲಾಮ್ ಧರ್ಮದಲ್ಲಿ ನಿರ್ದಿಷ್ಟ ವಸ್ತ್ರಗಳನ್ನೇ ಧರಿಸಬೇಕೆಂಬ ಯಾವುದೇ ನಿಯಮಗಳಿಲ್ಲ. ಆಯಾ ಕಾಲ, ಪ್ರದೇಶದ ಸಂಸ್ಕೃತಿ ಮತ್ತು ಹವಾಮಾನಕ್ಕೆ ಅನುಗುಣವಾದ ವಸ್ತ್ರಗಳನ್ನು ಧರಿಸಬಹುದು. ದೇಹದ ಉಬ್ಬು ತಗ್ಗುಗಳನ್ನು ಒಳಗಿನಿಂದ ಪ್ರತಿಬಿಂಬಿಸುವ ತೆಳುವಸ್ತ್ರ ಮತ್ತು ಬಿಗಿ ಉಡುಪನ್ನು ಮಹಿಳೆಯರು ಧರಿಸಬಾರದು. ಪುರುಷರು ಸ್ತ್ರೀಯರ ಮತ್ತು ಸ್ತ್ರೀಯರು ಪುರುಷರ ಉಡುಪನ್ನು ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುವಂತಿರಬಾರದು. ಆಯಿಶಾ(ರ) ವರದಿ ಮಾಡಿರುವಂತೆ, ಒಮ್ಮೆ ಅವರ ಸಹೋದರಿ ಅಸ್ಮಾ ಬಿಂತಿ ಅಬೂ ಬಕರ್(ರ) ಪ್ರವಾದಿವರ್ಯರ(ಸ) ಸನ್ನಿಧಿಗೆ ಬಂದಾಗ ತೆಳು ಉಡುಪು ಧರಿಸಿದ್ದರು. ತಕ್ಷಣ ಪ್ರವಾದಿ(ಸ) ಮುಖವನ್ನು ಬೇರೆಡೆಗೆ ತಿರುಗಿಸುತ್ತಾ “ಅಸ್ಮಾ, ಸ್ತ್ರೀಯು ಪ್ರೌಢೆಯಾದ ಬಳಿಕ ಆಕೆಯ ಮುಖ ಮತ್ತು ಮುಂಗೈಗಳ ಹೊರತು ದೇಹದ ಯಾವ ಭಾಗವೂ ಹೊರಗೆ ಕಾಣಿಸುವಂತಿರಬಾರದು.” (ಅಬೂ ದಾವೂದ್)

ಪ್ರಸಕ್ತ ಕಾಲದ ವಸ್ತ್ರ ಶೈಲಿನ್ನು ನೋಡಿದರೆ ಸ್ತ್ರೀಯರು ಧರಿಸುವಂತಹ ಕಾಲಿಗೆ ಅಂಟಿಕೊಳ್ಳುವ ಪ್ಯಾಂಟ್, ಸಣ್ಣ ಟಾಪ್ ಗಳು, ಅರ್ಧ ಕೈ ಅಥವಾ ಮುಕ್ಕಾಲು ಕೈಯ ವಸ್ತ್ರಗಳು ಪರಪುರುಷರನ್ನು ಆಕರ್ಷಿಸುವಂತಿರುತ್ತದೆ. ಅಂತಹ ಉಡುಪುಗಳನ್ನು ಪರ ಪುರುಷರ ಮುಂದೆ ಧರಿಸುವುದು ಸರಿಯಲ್ಲ.

“ಬಟ್ಟೆ ಧರಿಸಿಯೂ ನಗ್ನರಾಗಿರುವ, ಪರಪುರುಷರನ್ನು ಆಕರ್ಷಿಸುವ ಮತ್ತು ಸ್ವಯಂ ಆಕರ್ಷಿತರಾಗುವ ಸ್ತ್ರೀಯರು ನರಕವಾಸಿಗಳಾಗುವರು. ಅವರ ತಲೆಯು ವೈಯಾರದಲ್ಲಿ ಒಂಟೆಯ ಡುಬ್ಬದಂತೆ ವಕ್ರವಾಗಿರುತ್ತದೆ. ಈ ಸ್ತ್ರೀಯರು ಸ್ವರ್ಗ ಪ್ರವೇಶಿಸಲಿಕ್ಕಿಲ್ಲ. ಅದರ ಸುಗಂಧವನ್ನೂ ಸವಿಯಲಿಕ್ಕಿಲ್ಲ. ವಸ್ತುತಃ ಅದರ ಸುಗಂಧವು ಬಹಳ ದೂರದವರೆಗೆ ಹರಡುತ್ತದೆ.” (ರಿಯಾದುಸ್ಸಾಲಿಹೀನ್)

ಇನ್ನು ಪರಪುರುಷರ ಮುಂದೆ ಸ್ತ್ರೀಯರು ಕೇವಲ ಸತ್ರ್ ನ್ನು (ಎಲ್ಲ ಸಮಯದಲ್ಲೂ ಮರೆಸಬೇಕಾದ ಅಂಗ ಭಾಗಗಳು) ಮರೆಸಿದರೆ ಸಾಲದು. ಪರ್ದಾ ಎನ್ನುವುದು ಸತ್ರ್ ಗಿಂತಲೂ ಮಿಗಿಲಾದ ವಸ್ತುವಾಗಿದ್ದು ಅದನ್ನು ಮಹಿಳೆ ಮತ್ತು ವಿವಾಹ ನಿಷಿದ್ಧವಲ್ಲದ ಪುರುಷರ ಮಧ್ಯೆ ಏರ್ಪಡಿಸಲಾಗಿದೆ. ಹೂವು ಮತ್ತು ದುಂಬಿಯ ನಡುವೆ ಆಕರ್ಷಣೆ ಇರುವಂತೆ ಸ್ತ್ರೀ ಪುರುಷರ ನಡುವೆ ಆಕರ್ಷಣೆ ಸಹಜ. ಈ ಆಕರ್ಷಣೆಯನ್ನು ನಿಯಂತ್ರಿಸುವುದೇ ಪರ್ದಾದ ಉದ್ದೇಶ. ಅದು ಪರಪುರುಷರನ್ನು ಆಕರ್ಷಿಸುವಂತಾಗಿರಬಾರದು. ಆಭರಣ, ಅಲಂಕಾರ ಅಥವಾ ಸೌಂದರ್ಯವನ್ನು ಮರೆಸುವಂತಿರಬೇಕು. ಪರ್ದಾ ಕಪ್ಪು ಬಣ್ಣವೇ ಆಗಿರಬೇಕೆಂದಿಲ್ಲ. ಆದರೆ ಬಣ್ಣವು ಆಕರ್ಷಣೀಯವಾಗಿರಬಾರದು. ಕಪ್ಪು ಒಂದು ಆಕರ್ಷಕ ಬಣ್ಣವಲ್ಲವೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪರ್ದಾ ಸ್ತ್ರೀಯರಿಗೆ ಒಂದು ರಕ್ಷಾ ಕವಚವಾಗಿರುತ್ತದೆ. ಪರ್ದಾದ ಉದ್ದೇಶ ಸೌಂದರ್ಯವನ್ನು ಅಡಗಿಸಿ ಸಮಾಜದಲ್ಲಿ ಪುರುಷರ ಕೆಟ್ಟ ದೃಷ್ಟಿಯಿಂದ ಮತ್ತು ಕೆಡುಕಿನಿಂದ ರಕ್ಷಿಸುವುದಾಗಿರುತ್ತದೆ. ಮುಸ್ಲಿಮ್ ಸ್ತ್ರೀಯರು ಧರಿಸುವಂತಹ ಪರ್ದಾ ಸ್ತ್ರೀಯರಿಗೆ ಘನತೆ, ಗೌರವ ಮತ್ತು ಭದ್ರತೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.