ಕೊರೋನ ಕರ್ಫ್ಯೂ ಉಲ್ಲಂಘಿಸಿ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ ಬಾಲಕನಿಗೆ ಥಳಿಸಿದ ಯುಪಿ ಪೊಲೀಸರು: ಬಾಲಕ ಮೃತ್ಯು

0
1135

ಸನ್ಮಾರ್ಗ ವಾರ್ತೆ

ಲಕ್ನೋ: ಕೊರೋನ ಕರ್ಫ್ಯೂ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಇಬ್ಬರು ಪೊಲೀಸರು ಥಳಿಸಿದ ಪರಿಣಾಮ 17 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ಸದ್ಯ ಆರೋಪಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಉನ್ನಾವೊದ ಬಂಗರ್ಮೌ ಪಟ್ಟಣದಲ್ಲಿರುವ ಬಾಲಕ ತನ್ನ ಮನೆಯ ಹೊರಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆತನನ್ನು ಪೊಲೀಸರು ಎತ್ತಿಕೊಂಡು, ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ದೈಹಿಕ ಹಲ್ಲೆ ನಡೆಸಿದರು. ನಂತರ ಆತನ ಸ್ಥಿತಿ ಹದಗೆಟ್ಟಿತು ಮತ್ತು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರನ್ನು ಮೃತಪಟ್ಟಿರುವುದು ತಿಳಿದು ಬಂತು ಎಂದು ಬಾಲಕನ ಕುಟುಂಬ ಆರೋಪಿಸಿದ್ದಾರೆ.

ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಸ್ಥಳೀಯರು ಲಕ್ನೋ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಲಕನ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಘಟನೆಯ ಬಳಿಕ ತಕ್ಷಣವೇ ಜಾರಿಗೆ ಬರುವಂತೆ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಗೃಹ ರಕ್ಷಕರನ್ನು ಅಮಾನತುಗೊಳಿಸಲಾಗಿದೆ ಮತ್ತು ಸಂಪೂರ್ಣ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರೋನ ವೈರಸ್ ಪ್ರಕರಣಗಳು ಹರಡುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರವು ಮೇ 24 ರವರೆಗೆ ರಾಜ್ಯದಲ್ಲಿ ಕರೋನಾ ಕರ್ಫ್ಯೂ ವಿಧಿಸಲಾಗಿದೆ.