20 ಲಕ್ಷ ವಿದೇಶಿಯರನ್ನು ದೇಶದಿಂದ ಹೊರ ಹಾಕುತ್ತೇವೆ- ಕುವೈಟ್ ಸಂಸದೆ ಸಫಾ ಅಲ್ ಹಾಶಿಂ: ಭಾರತೀಯರಲ್ಲಿ ಆತಂಕ

0
5517

ಕುವೈಟ್ ಸಿಟಿ, ಜೂ.13: ಕುವೈಟ್‍ನಿಂದ 20 ಲಕ್ಷ ವಿದೇಶಿಯರನ್ನು ಹೊರಗೆ ಹಾಕುವುದಾಗಿ ಸಂಸದೆ ಸಫಾ ಅಲ್ ಹಾಶಿಂ ಹೇಳಿದ್ದಾರೆ. ಸ್ವಂತ ದೇಶದಲ್ಲಿಯೇ ಕುವೈಟಿಗಳು ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಇದೆ. ಇದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ಎರಡು ದಶಲಕ್ಷ ವಿದೇಶಿಗಳನ್ನು ಅವರ ಊರಿಗೆ ಕಳುಹಿಸುತ್ತೇವೆ. ಜನಸಂಖ್ಯೆಯಲ್ಲಿ ಸಮತೋಲನ ದೇಶದ ಅಗತ್ಯವಾಗಿದೆ. ಸತ್ಯಸಂಧರು ಮತ್ತು ದೇಶಕ್ಕೆ ಅಗತ್ಯವಿರುವ ಪ್ರತಿಭೆಗಳನ್ನು ಹೊಂದಿರುವ ವಿದೇಶಿಗಳಿಗೆ ನಾವು ವಿರುದ್ಧವಾಗಿಲ್ಲ. ಉತ್ಪಾದನಾ ಸಾಮರ್ಥ್ಯವಿಲ್ಲದ ಜನಸಮೂಹ ನಮಗೆ ಬೇಡ ಎಂದು ಅಲ್ ಸಫಾ ಹಾಶಿಂ ಹೇಳಿದರು.

47 ಲಕ್ಷ ಕುವೈಟ್ ನಿವಾಸಿಗಳಲ್ಲಿ ಕುವೈಟ್ ಸ್ವದೇಶಿಗಳು ಕೇವಲ 14 ಲಕ್ಷ ಮಂದಿ ಮಾತ್ರ ಇದ್ದಾರೆ. ಒಟ್ಟು ಜನಸಂಖ್ಯೆಯ ಅರ್ಧವಾದರೂ ಸ್ವದೇಶಿಗಳಿರಬೇಕು. ವಿದೇಶಿಯರು ಅವರ ಊರಿಗೆ ಕಳುಹಿಸುವ ಹಣಕ್ಕೆ ಶೇ.5ರಷ್ಟು ತೆರಿಗೆ ವಿಧಿಸಬೇಕು. ಕಳೆದ ಐದು ವರ್ಷದಲ್ಲಿ 2000 ಕೋಟಿ ದೀನಾರ್ ವಿದೇಶಿಯರು ಕುವೈಟ್‍ನಿಂದ ತಮ್ಮೂರಿಗೆ ಕಳುಹಿಸಿದ್ದಾರೆ. ಹಣವು ಭಾರೀ ಪ್ರಮಾಣದಲ್ಲಿ ಹೊರಗೆ ಹರಿಯುವುದು ದೇಶದ ಆರ್ಥಿಕತೆಗೆ ಹಾನಿಯಾಗಿದೆ. ಈಜಿಪ್ಟ್ ನಲ್ಲಿ ಸಿರಿಯನ್ನರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ತಮ್ಮ , ಕೆಲಸ, ವ್ಯಾಪಾರವನ್ನು ಅವರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕುವೈಟಿನಲ್ಲಿರುವ ಈಜಿಪ್ಟ್ ಪ್ರಜೆಗಳ ವಿರುದ್ಧ ಇದೇ ನ್ಯಾಯವನ್ನು ಹೇಳಬಹುದಲ್ಲವೇ ಎಂದು ಸಂಸದೆ ಹೇಳಿದರು. ಕುವೈಟ್‍ನ ಬೀಚ್, ಪಾರ್ಕುಗಳಲ್ಲಿ ವಿದೇಶಿಯರಿಗೆ ಶುಲ್ಕ ವಿಧಿಸಬೇಕೆಂದು ಕಳೆದ ದಿವಸ ಸಫಾ ಹಾಶಿಂ ಹೇಳಿದ್ದರು.