ಆರ್‌ಎಸ್‌ಎಸ್‌ಗೂ ಸೂಫಿಸಂಗೂ ಏನು ಸಂಬಂಧ?

0
180

✍️ಮಿಷಲ್

ಇಮಾಮ್ ಸಾಬ್‌ಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಪ್ರಶ್ನೆ ಇದೆಯಲ್ಲ ಅಂತದ್ದೇ ಒಂದು ಪ್ರಶ್ನೆಯನ್ನು ಈಗ ಆರ್‌ಎಸ್‌ಎಸ್‌ ಕೇಳಿಕೊಳ್ಳುವಂತೆ ಮಾಡಿದೆ. ಆರ್‌ಎಸ್‌ಎಸ್‌ಗೂ ಸೂಫಿಸಂಗೂ ಏನು ಸಂಬಂಧ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಉತ್ತರ ಪ್ರದೇಶದಲ್ಲಿ ನಡೆದಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕಾರ್ಯಕ್ರಮ.

ಲಕ್ನೋದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತಾಡಿದ್ದು ಯಾರು ಗೊತ್ತೇ? ಆರ್‌ಎಸ್‌ಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್. ಅವರ ಮಾರ್ಗದರ್ಶನದಲ್ಲಿಯೇ ರಾಷ್ಟ್ರೀಯ ಮುಸ್ಲಿಂ ಮಂಚ್ ಕಾರ್ಯನಿರ್ವಹಿಸುತ್ತಿದೆ. ಸೂಫಿಸಂ ಅನ್ನು ಹರಡಲು ದೇಶಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಸ್ಲಿಂ ರಾಷ್ಟ್ರೀಯ ಮಂಚ್ ನಿರ್ಧರಿಸಿದೆ. ಮುಸ್ಲಿಮರು ಸೂಫಿಸಮ್ ಅನ್ನು ಅನುಸರಿಸಬೇಕು ಎಂಬ ಸಂದೇಶವನ್ನು ಕೊಡಲು ಆರ್‌ಎಸ್‌ಎಸ್‌ ಹೊರಟಿದೆ.

ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಒಟ್ಟು 10 ಜಾಗೃತಿ ಕಾರ್ಯಕ್ರಮವನ್ನು ಈ ಸಂಘಟನೆ ಆಯೋಜಿಸಲಿದೆ. ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದ್ರೇಶ್ ಕುಮಾರ್ ಅವರ ಜೊತೆ ಮುಸ್ಲಿಂ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಚಾಲಕ ಮೊಹಮ್ಮದ್ ಅಫ್ಜಲ್, ಶಾಹಿದ್ ಅಕ್ತರ್, ಸೈಯದ್ ರಜಾ ಹುಸೇನ್ ರಿಝ್ವಿ, ಗಿರೀಶ್ ಜಿಯಾಲ್, ಇಸ್ಲಾಂ ಅಬ್ಬಾಸ್, ರೇಷ್ಮಾ ಹುಸೇನ್, ಶಾಲಿನಿ ಅಲಿ ಮತ್ತು ಶೌಕತ್ ಅಲಿ ಮುಂತಾದವರು ಭಾಗವಹಿಸಿದ್ದರು.

ಈ ನಡುವೆ ಈಗ ನಡೆಯುತ್ತಿರುವ ಪ್ರತಿಭಟನೆಯನ್ನು ಪರೋಕ್ಷವಾಗಿ ಇಂದ್ರೇಶ್ ಕುಮಾರ್ ವಿರೋಧಿಸಿದರು. ದೇಶದ ಐಕ್ಯತೆ ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರತಿಭಟನೆ ಎಂಬಂತೆ ಹೇಳಿದರು. ರಾಜಕೀಯ ಅಧಿಕಾರವನ್ನು ಹಿಡಿಯುವ ಪ್ರತಿಭಟನೆ ಎಂಬಂತೆ ಮಾತಾಡಿದ್ರು.

ವಿಶೇಷ ಏನೆಂದರೆ ಈ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಹಿಂದೆ ಆರ್‌ಎಸ್‌ಎಸ್‌ ಚಿಂತನೆ ಇದೆ ಎಂಬ ಆರೋಪ ಬಲವಾಗಿದೆ. ಅದು ತನಗೆ ಬರುವ ದೇಣಿಗೆಯ ಬಗ್ಗೆ ಈವರೆಗೂ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಸ್ವತಃ ತನ್ನನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿಲ್ಲ. ಕಳೆದ ಆರು ದಶಕಗಳಿಂದ ಅದು ತನ್ನ ನಾಗಪುರದ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನೇ ಹಾರಿಸಿರಲಿಲ್ಲ. ನ್ಯಾಯಾಲಯ ಹೇಳಿದ ಬಳಿಕ ಅದು ಧ್ವಜ ಹಾರಾಟಕ್ಕೆ ಮುಂದಾಗಿತ್ತು. ಇಂಥದ್ದೊಂದು ಸಂಘಟನೆ ಮುಸ್ಲಿಮರ ಹಿತದ ಬಗ್ಗೆ ಮಾತಾಡುವುದು ಮತ್ತು ದೇಶಪ್ರೇಮವನ್ನು ಕಲಿಸಿಕೊಡುವುದು ಹಾಸ್ಯಾಸ್ಪದ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಮುಸ್ಲಿಮರು ಶಾಂತಿ ಪ್ರೀತಿ ಸಹನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುವ ಆರ್ ಎಸ್ ಎಸ್ ಹಿಂದುಗಳಿಗೆ ಕೊಡುವ ಕರೆ ಏನು ಎಂಬ ಪ್ರಶ್ನೆ ಎದುರಾಗಿದೆ. ಹಿಂದುಳಿದ ಮತ್ತು ದುರ್ಬಲ ವರ್ಗದ ಹಿಂದೂ ಯುವಕರ ಕೈಗೆ ಆಯುಧವನ್ನು ಕೊಟ್ಟು ಮತ್ತು ಮುಸ್ಲಿಂ ದ್ವೇಷವನ್ನು ಅವರೊಳಗೆ ತುಂಬಿಸಿ ಚೂ ಬಿಡುವ ಆರ್ ಎಸ್ ಎಸ್ ಇನ್ನೊಂದು ಕಡೆಗೆ ಮುಸ್ಲಿಮರಿಗೆ ಸಹನೆಯ ಪಾಠ ಮಾಡುವುದು ನಾಚಿಕೆಗೇಡು ಎಂಬ ಅಭಿಪ್ರಾಯವಾಗಿದೆ.

ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಜನಬೆಂಬಲ ಇಲ್ಲದ ಮತ್ತು ಮುಸ್ಲಿಮರು ಒಪ್ಪದ ಸಂಘಟನೆಯನ್ನು ಹುಟ್ಟು ಹಾಕಿ ಕೆಲವು ಮುಸ್ಲಿಮರನ್ನು ಸೇರಿಸುವುದರಿಂದ ಮುಸ್ಲಿಂ ಸಮುದಾಯದಲ್ಲಿ ವಿಶ್ವಾಸಾರ್ಹತೆಯನ್ನು ಹುಟ್ಟು ಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.