ಮಣ್ಣಿನ ಕಾಲುದಾರಿಯಲ್ಲಿ ಮಗು ಮತ್ತು ಅಮ್ಮ

0
1513
ಸಾಂದರ್ಭಿಕ ಚಿತ್ರ

ಏ. ಕೆ. ಕುಕ್ಕಿಲ

ಮಳೆ ಪ್ರಾರಂಭವಾಗಿತ್ತು. ಮಬ್ಬು ಮಬ್ಬಾದ ವಾತಾವರಣ. ಇಡೀ ದಿನ ಮಳೆ ಸುರಿಯುವ ಸೂಚನೆಯನ್ನು ಕಪ್ಪು ಮೋಡಗಳು ನೀಡುತ್ತಿದ್ದುವು. ತನ್ನ ಪುಟ್ಟ ಮಗಳನ್ನು ಶಾಲೆಗೇ ಕಳುಹಿಸಬೇಕೋ ಬೇಡವೋ ಎಂಬ ಚಿಂತೆ ತಾಯಿಗೆ. ಮಣ್ಣಿನ ಕಾಲು ದಾರಿಯಲ್ಲಿ ಎರಡ್ಮೂರು ತಿರುವುಗಳನ್ನು ದಾಟಿದರೆ ಕೊನೆಯಲ್ಲಿ ಸಿಗುವುದೇ ಮಗುವಿನ ಶಾಲೆ. ಆಕೆ ಮಗುವನ್ನು ಶಾಲೆಗೆ ಕಳುಹಿಸಲು ತೀರ್ಮಾನಿಸಿದಳು. “ಮಣ್ಣಿನ ಕಾಲು ದಾರಿಯಲ್ಲಿ ಹೋಗಬೇಡ, ತುಸು ದೂರದ್ದಾದರೂ ರಸ್ತೆಯಲ್ಲೇ ಹೋಗು..” ಎಂದು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಳು. ಮಳೆಯನ್ನು ಆನಂದಿಸುತ್ತಾ ಮಗು ಹೊರಟಿತು.
ಸಂಜೆಯ ಹೊತ್ತಿಗೆ ಮಳೆಯ ಅಬ್ಬರ ಜೋರಾಯಿತು. ಜೊತೆಗೇ ಗುಡುಗು ಮತ್ತು ಸಿಡಿಲು. ಆಕೆಗೆ ಭಯವಾಯಿತು. ಮಗುವನ್ನು ಕರೆತರಲೆಂಬ ಧಾವಂತದಲ್ಲಿ ದಾರಿ ಮರೆತು ಆಕೆ ಮಣ್ಣಿನ ಕಾಲುದಾರಿಯಲ್ಲೇ ಹೊರಟಳು. ಮಗು ಮನೆ ಸೇರಿತು. ಅಮ್ಮನನ್ನು ಹುಡುಕಾಡಿತು. ಕಣ್ಣಲ್ಲಿ ನೀರು. ಸ್ವಲ್ಪ ಸಮಯದಲ್ಲೇ ಊರವರು ಅಮ್ಮನನ್ನು ಎತ್ತಿಕೊಂಡು ಬಂದರು. ಕಾಲುದಾರಿಯ ತಿರುವಿನ ಗುಡ್ಡ ಜರಿದು ಆಕೆ ಮೃತಪಟ್ಟಿರುವುದಾಗಿ ಅವರು ಪರಸ್ಪರ ಮಾತಾಡುತ್ತಿದ್ದರು. ಮಗುವಿಗೆ ಒಂದೂ ಅರ್ಥವಾಗಲಿಲ್ಲ. ಅದು ಪದೇ ಪದೇ ಪ್ರಶ್ನಿಸುತ್ತಿತ್ತು-
ಯಾಕಮ್ಮಾ, ನೀನು ಆ ಕಾಲುದಾರಿಯಲ್ಲಿ ಹೋದೆ?