ಬಿಷಪ್ ಫ್ರಾಂಕೊ ಅತ್ಯಾಚಾರ ಪ್ರಕರಣ: ಸಿಸ್ಟರ್ ಲಿಸಿಯವರನ್ನು ಬೆಂಬಿಡದ ಮದರ್ ಸುಪಿರೀಯರ್ ನೋಟಿಸು!

0
634

ಸನ್ಯಾಸಿನಿಯರ ಸಮೂಹದಿಂದ ಹೊರಹಾಕುವ ಬೆದರಿಕೆ!

ಮೂವಾಟ್ಟುಪುಝ(ಕೇರಳ) ಮಾ. 25: ಕ್ರೈಸ್ತ ಸನ್ಯಾಸಿನಿಯನ್ನು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿ ಜಲಂಧರ್ ಮಾಜಿ ಬಿಷಪ್ ಫ್ರಾಂಕೊ ಮುಳಗಲ್‍ರ ವಿರುದ್ಧ ಸಾಕ್ಷಿ ಹೇಳಿದ ಸಿಸ್ಟರ್ ಲಿಸಿ ವಡಕ್ಕಲನ್‍ರಿಗೆ ವಿಜಯವಾಡಕ್ಕೆ ಮರಳಿ ಹೋಗಬೇಕೆಂದು ಸೂಚಿಸಿ ಎಫ್‍ಸಿಸಿ ಮದರ್ ಸುಪರೀಯರ್ ಅಲ್ಫೋನ್ಸ ಎಬ್ರಾಹಾಂ ಪುನಃ ನೋಟಿಸು ಕಳುಹಿಸಿದ್ದಾರೆ.

ಮಾರ್ಚ್ 31ರೊಳಗೆ ವಿಜಯವಾಡಕ್ಕೆ ಮರಳಿ ಹೋಗಬೇಕು. ಮೂವಾಟ್ಟುಪುಯ ಜ್ಯೋತಿ ಭವನದಲ್ಲಿ ಎಪ್ರಿಲ್ 30ರ ನಂತರ ಉಳಿದುಕೊಳ್ಳುವಂತಿಲ್ಲ. ಇಲ್ಲದಿದ್ದರೆ ನಿಮ್ಮನ್ನು ಸನ್ಯಾಸಿನಿಯರ ಸಮೂಹದಿಂದ ಹೊರಹಾಕಲಾಗುವುದು ಎಂದು ನೋಟಿಸಿನಲ್ಲಿ ಸಿಸ್ಟರ್ ಲಿಸಿಗೆ ಮದರ್ ಸುಪರೀಯರ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಎಪ್ರಿಲ್ 30ರವರೆಗೆ ಜ್ಯೋತಿ ಭವನದಲ್ಲಿ ಉಳಿಯಲು ಮನವಿ ಸಲ್ಲಿಸುವೆ ಎಂದು ಸಿಸ್ಟರ್ ಲಿಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿಸ್ಟರ್ ಲಿಸಿ ವಡಕ್ಕಲನ್‍ರಿಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಪೊಲೀಸರೊಂದಿಗೆ ಆಶ್ರಮದಲ್ಲಿ ವಾಸವಿದ್ದು ಸುರಕ್ಷೆ ನೀಡುವುದರಿಂದ ನಮಗೆ ಅಸೌಕರ್ಯವಾಗುತ್ತಿದೆ ಎಂದು ಎಫ್‍ಸಿಸಿ ಅಧಿಕಾರಿಗಳು ಸಲ್ಲಿಸಿದ ದೂರಿನಲ್ಲಿ ಮೂವಾಟ್ಟುಪುಝ ಕೋರ್ಟು ಸಿಸ್ಟರ್ ಲಿಸಿಗೆ ನೀಡಲಾಗಿದ್ದ ಸುರಕ್ಷೆಯನ್ನು ಹಿಂಪಡೆಯಲು ಸರಕಾರಕ್ಕೆ ಸೂಚಿಸಿತ್ತು.