ಪಂಜರದ ಗಿಣಿಯ ಕತೆ

0
1717

✒ ಸಲೀಮ್ ಬೋಳಂಗಡಿ

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ತನ್ನ 55 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಖೇದಕರವಾದ ಕಾರ್ಯಾಚರಣೆಗೆ ಸಾಕ್ಷಿ  ಯಾಯಿತು. ಸಾಮಾನ್ಯವಾಗಿ ಕೇಂದ್ರ ಸರಕಾರದ ಕೈಗೊಂಬೆಯೆಂಬ ಆರೋಪಗಳು ಸಿ.ಬಿ.ಐ. ಮೇಲೆ ಹಲವಾರು ಬಾರಿ ಕೇಳಿ ಬಂದರೂ  ಅದಕ್ಕೆ ತನ್ನದೇ ಆದ ಒಂದು ಗೌರವ, ಘನತೆ ಇತ್ತು. ಆದರೆ ಕಳೆದೆರಡು ತಿಂಗಳಿಂದ ಈರ್ವರು ಉನ್ನತಾಧಿಕಾರಿಗಳ ನಡುವಿನ ಶೀತಲ ಸಮರ ಸಿ.ಬಿ.ಐ. ಹೆಸರಿಗೇ ಕಳಂಕ ತಂದಿದೆ. ಸಿ.ಬಿ.ಐ.ಯ ಹೆಸರಿಗೆ ಕಳಂಕ ತರಲು ಮುಖ್ಯ ಕಾರಣ ಈ ಸಂಸ್ಥೆಯೊಳಗೆ ಕೇಂದ್ರ ಸರಕಾರ  ನಡೆಸಿದ ಹಸ್ತಕ್ಷೇಪವೆಂದರೆ ತಪ್ಪಾಗಲಾರದೇನೋ?

ಆದರೆ ಈ ಶೀತಲ ಸಮರ ಕಳೆದೆರಡು ತಿಂಗಳಿಂದ ನಡೆಯುತ್ತಿದ್ದರೂ ಸುಮ್ಮನಿದ್ದು ಹಠಾತ್ತನೆ ಏಕಾಏಕಿ ಮಧ್ಯ ರಾತ್ರಿಯ ಅಂತಿಮ ಗಳಿ ಗೆಯಲ್ಲಿ ಕಾರ್ಯಾಚರಣೆ ನಡೆಸಿ ಈರ್ವರನ್ನು ರಜೆಯ ಮೇಲೆ ತೆರಳಲು ಸೂಚಿಸಿರುವುದು ಈ ದೇಶದ ಜನರಲ್ಲಿ ಸಾಕಷ್ಟು ಅನುಮಾನಗಳು  ಮೂಡುವಂತಾಗಿದೆ. ಕೇಂದ್ರದ ಈ ನಿರ್ಧಾರದ ವಿರುದ್ಧ ಅಲೋಕ್ ವರ್ಮ ಸುಪ್ರೀಮ್ ಕೋರ್ಟಿನ ಮೊರೆ ಹೋದಾಗ ಸುಪ್ರೀಮ್  ಕೋರ್ಟು ನೀಡಿದ ಆದೇಶ ಈ ಅನುಮಾನಗಳಿಗೆ ಇನ್ನಷ್ಟು ಬಲ ನೀಡಿದೆ. ಕೇಂದ್ರ ತಳೆದ ಈ ನಿರ್ಧಾರಗಳನ್ನು ಒಪ್ಪಿಕೊಳ್ಳಲಾಗದು.  ಹಠಾತ್ತನೆ ಈರ್ವರು ಸಿಬಿಐ ಉನ್ನತಾಧಿಕಾರಿಗಳನ್ನು ರಜೆಯ ಮೇಳೆ ತೆರಳಲು ಸೂಚಿಸಿದುದರ ಕಾರಣವನ್ನು ಮುದ್ರೆ ಹಾಕಿದ  ಲಕೋಟೆಯಲ್ಲಿ ಬರೆದು ಕೊಡಬೇಕು ಸುಪ್ರೀಮ್ ಕೋರ್ಟ್ ಹೇಳಿದೆ.

ಹೊಸದಾಗಿ ನೇಮಕಗೊಂಡ ಅಧಿಕಾರಿಯ ಮೇಲೆ ಧಾರಾಳ ಆರೋಪಗಳಿವೆ. ಅವರು ಹೊಸ ನಿರ್ಧಾರಗಳನ್ನು ಈಗ ತೆಗೆಯಬಾರದು  ಮತ್ತು ಇನ್ನು ಮುಂದಕ್ಕೆ ತಳೆಯದ ನಿರ್ಧಾರಗಳನ್ನು ಮುದ್ರೆ ಹಾಕಿದ ಲಕೋಟೆಯಲ್ಲಿ ಬರೆದು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂಬುದೂ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶ ಏ.ಕೆ. ಪಟ್ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ಒಪ್ಪಿಸಬೇಕೆಂದು ಸುಪ್ರೀಮ್ ಕೋರ್ಟು ಆದೇಶಿಸಿದೆ. ಆದ್ದರಿಂದ ಸುಪ್ರೀಮ್ ಕೋರ್ಟು ನೀಡಿದ ಆದೇಶ ಕೇಂದ್ರ ಸರಕಾರದ ಅನುಮಾನಾಸ್ಪದ  ಕಾರ್ಯಾಚರಣೆಗೆ ನೀಡಿದ ಹೊಡೆತವೆಂದೇ ಪರಿಗಣಿಸಬೇಕು.

ನೋಡಿ, ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿದೆ ಯೆಂದು ಹೇಳಲಾಗುವ ದೇಶದ ಹಗರಣಗಳಲ್ಲೇ ಅತೀ ದೊಡ್ಡ ಹಗರಣವಾದ ರಫೇಲ್  ಹಗರಣದ ಪ್ರಾಥಮಿಕ ತನಿಖೆಗೆ ಅಲೋಕ್ ವರ್ಮಾ ಸಜ್ಜಾಗುತ್ತಿದ್ದಂತೆಯೇ ಹಠಾತ್ತನೆ ರಜೆಯಲ್ಲಿ ತೆರಳಲು ಆದೇಶಿಸಿರುವುದು ಅನುಮಾನ  ಮೂಡಿಸುತ್ತಿದೆ. ಕೇಂದ್ರ ಸರಕಾರ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂಬ ಸಂಶಯ ಬಲವಾಗಿದೆ.

ದೆಹಲಿಯ ಖ್ಯಾತ ಮಾಂಸ ರಫ್ತು ವ್ಯಾಪಾರಿ ಮುಈನ್ ಖುರೇಶಿ ಸಹಿತ ಕಪ್ಪು ಹಣದ ಪ್ರಕರಣದಲ್ಲಿ ಬಂಧಿತರಾದ ವ್ಯಕ್ತಿಗಳನ್ನು  ವಿಚಾರಣೆಯಿಂದ ತೆರವುಗೊಳಿಸಲು ತನಿಖೆಯ ನೇತೃತ್ವ ವಹಿಸಿದ ಅಸ್ತಾನರವರು ಎರಡು ಕೋಟಿ ಲಂಚ ಪಡೆದಿದ್ದಾರೆಂಬ ಕುರಿತು ಕೇಸು  ದಾಖಲಾಗಿದೆ. ಜೊತೆಗೆ ಇನ್ನು ಆರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಇವರ ವಿರುದ್ಧ ತನಿಖೆ ನಡೆಯುತ್ತಿದೆ. ಸಿ.ಬಿ.ಐ. ಕೇಂದ್ರ ವಿಜಿಲೆಸ್ಸ್ ಕಮೀಷನ್‍ಗೆ ತಿಳಿಸದೆ. ಇದಕ್ಕೆ ಉತ್ತರವಾಗಿ ಅಲೋಕ್ ವರ್ಮ ವಿರುದ್ಧವೂ ಹತ್ತು ಭ್ರಷ್ಟಾಚಾರ ಪ್ರಕರಣದ ಆರೋಪ ಹೊರಿಸಲಾಗಿದೆ. ಈ ಎರಡೂ  ಬಿಳಿ ಕಾಲರ್‍ಗಳ ನಡುವಿನ ತಿಕ್ಕಾಟವನ್ನು ಸರಿಪಡಿಸಲು ಹೋದ ಕೇಂದ್ರವು ತನಗೆ ಹೆಚ್ಚು ಆಪ್ತರಾಗಿರುವ ಅಸ್ತಾನರವರ ಪ್ರಕರಣದ ತನಿಖೆ  ನಡೆಸುವ ಅಧಿಕಾರಿಯನ್ನು ಅಂಡಮಾನ್‍ಗೆ ವರ್ಗಾಯಿಸಲಾಯಿತು. ಇಷ್ಟಕ್ಕೂ ರಾಕೇಶ್ ಅಸ್ತಾನ ಪ್ರಧಾನಿಗಳ ಆಪ್ತ ಗುಜರಾತ್‍ನ ಕೇಡರ್  ಐ.ಪಿ.ಎಸ್. ಅಧಿಕಾರಿ ಎನ್ನುವುದನ್ನು ಸ್ಮರಿಸಲೇಬೇಕು. ಹೀಗೆ ತನ್ನ ಆಪ್ತರ ರಕ್ಷಣೆಗೆ ಕೇಂದ್ರ ಮುಂದಾಯಿತು ಎಂದರೆ ತಪ್ಪಾಗಲಾರದು. ಈ  ವಿಚಾರವಾಗಿ ವಿರೋಧ ಪಕ್ಷಗಳು ಸಕ್ರಿಯವಾಗಿ ರಂಗಕ್ಕಿಳಿದಾಗ ಅನ್ಯದಾರಿಯಿಲ್ಲದೆ ತನಿಖೆಗಾಗಿ ವಿಶೇಷ ಆಯೋಗವನ್ನು ನೇಮಿಸಬೇಕಾಯಿತು.

ಐದು ವರ್ಷಗಳಿಗಿಂತ ಹಿಂದೆ ಸುಪ್ರೀಮ್ ಕೋರ್ಟು ಸಿ.ಬಿ.ಐ.ಯನ್ನು ‘ಗೂಡಲ್ಲಿ ಬಂಧಿಸಿಟ್ಟ ಗಿಣಿ’ ಎಂದು ಹೇಳಿತ್ತು. ಆಯಾ ಸರಕಾರದ  ಒತ್ತಾಸೆಯಂತೆ ಸಿಬಿಐ ಮುಂದುವರಿಯುತ್ತಿತ್ತು. ಈ ಹೇಳಿಕೆಯಿಂದ ಆಡಳಿತಗಾರರಿಗೆ ಕಸಿವಿಸಿಯೇನೂ ಆಗಿಲ್ಲ. ಆದ್ದರಿಂದಲೇ ಅವರು ಈ ಸಂಸ್ಥೆಯೊಂದಿಗೆ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಕೇವಲ ರಾಕೇಶ್ ಅಸ್ತಾನರವರ ಆರೋಪಗಳನ್ನು ಕೇಳಿ ಅಲೋಕ್ ವರ್ಮರನ್ನು ರಜೆಯಲ್ಲಿ ತೆರಳುವಂತೆ ಹೇಳಿದೆ. ಆದರೆ ಅವರ ನಂತರ ಅಧಿಕಾರ ಸ್ವೀಕರಿಸಿದ ನಾಗೇಶ್ವರ್ ರಾವ್ ಮೊತ್ತ ಮೊದಲು ಮಾಡಿದ ಕಾರ್ಯವೆಂದರೆ ರಾಕೇಶ್  ಅಸ್ತಾನರ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ಅಂಡಮಾನ್ ನಿಕೋಬರ್‍ಗೆ ತಕ್ಷಣ ವರ್ಗಾಯಿಸಿದ್ದಾಗಿದೆ. ಹೀಗೆ ತಮ್ಮ ಅಧಿಕಾರ ಬಳಸಿ ತಮಗೆ ಆಪ್ತರಾದವರನ್ನು ಸಂರಕ್ಷಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ತೊಡಗಿದೆ ಎಂದು ಹೇಳಬೇಕು.

ತುರ್ತು ಪರಿಸ್ಥಿತಿಯ ಬಳಿಕ  ಹಲವು ಬಾರಿ ಸಿಬಿಐಯ ಪ್ರಾಮಾಣಿಕತೆಯ ಕುರಿತು ಸಂಶಯ ವೇಳುವಂತಹ ಹಲವು ಘಟನೆಗಳು ನಡೆದಿವೆ. ಈ ಬಾರಿ ಕೇಂದ್ರ ಸರಕಾರವು ತನ್ನ ಕಾಲಬುಡಕ್ಕೆ ನೀರು ಬರುವ ಒಂದು ಪ್ರಕರಣದ ತನಿಖೆಯ ಗತಿ ಬದಲಿಸಲು ಇಂತಹ ಒಂದು ಕಾರ್ಯಾಚರಣೆಗೆ  ಮುಂದಾಗಿದೆ ಎಂಬುದು ನಿಸ್ಸಂಶಯ. ಒಂದು ವೇಳೆ ರಫೇಲ್ ಹಗರಣದ ತನಿಖೆ ಸಮರ್ಪಕವಾಗಿ ನಡೆದರೆ ಅದು ಕೇಂದ್ರಕ್ಕೆ ಉರುಳಾಗುವ  ಸಾಧ್ಯತೆಯಿದೆ ಯೆಂದೂ ಹೇಳಲಾಗುತ್ತದೆ. ಪ್ರಧಾನಿಗಳ ರಾಜೀನಾಮೆ ತನಕವೂ ಅದು ತಲುಪುವ ಸಾಧ್ಯತೆಯಿತ್ತು.

ಹೀಗಿರುವಾಗ  ರಾತ್ರೋರಾತ್ರಿ ಕೇಂದ್ರ ಸರಕಾರದ ಬಲವಂತದ ಕಾರ್ಯಾ ಚರಣೆ ಪ್ರಶ್ನಾರ್ಹವೇ ಸರಿ. ಹಾಗೆಯೇ ಸುಪ್ರೀಮ್ ಕೋರ್ಟು ಎರಡು ವಾರಗಳೊಳಗೆ ತನಿಖೆ ಪೂರ್ಣಗೊಳಿಸಿ ಈ ಬಗ್ಗೆ ವಿವರಗಳನ್ನು ನೀಡಬೇಕೆಂದು ಆದೇಶ ನೀಡಿರು ವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತರುವ  ವಿಚಾರವಾಗಿದೆ. ನ್ಯಾಯಾಂಗದ ಈ ಮಧ್ಯ ಪ್ರವೇಶ ಸಮಯೋಚಿತವಾಗಿದೆ. ಕೇಂದ್ರ ಸರಕಾರ ತನ್ನ ಸ್ವಾರ್ಥಕ್ಕಾಗಿ ಸಿ.ಬಿ.ಐ.ಯನ್ನು ದುರ್ಬಲಗೊಳಿಸಲು ಹೊರಟಿದೆಯೇ ಎಂಬ ಅನುಮಾನವನ್ನು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ನಡೆಸುತ್ತಿರುವ ಆರೋಪಗಳು ಪುಷ್ಠೀಕರಿಸುವ  ರೀತಿಯಲ್ಲಿ ಕೇಂದ್ರ ಸರಕಾರ ಮುನ್ನಡೆಯುತ್ತಿದೆ. ಹೀಗಿರುವಾಗ ಸಿ.ಬಿ.ಐ.ಯ ವಿಶ್ವಾಸಾರ್ಹತೆಯನ್ನು ಉಳಿಸ ಬೇಕಾದ ಅನಿವಾರ್ಯತೆ  ಎದುರಾಗಿದೆ.