ಸನ್ಮಾರ್ಗ ಕಳಕಳಿ: ಆ ಅಳುವನ್ನು ನಿರ್ಲಕ್ಷಿಸಬೇಡಿ

0
749

ದೊಡ್ಡವರಾದರೋ ಹೊರಗೆ ಹೋಗಿ ಕಾಡಿ ಬೇಡಿ ಹಸಿವು ತಣಿಸಿಕೊಳ್ತಾರೆ. ಆದರೆ, ಪುಟ್ಟ ಮಕ್ಕಳು ಏನ್ ಮಾಡ್ಯಾವು? ಅವುಗಳಿಗೆ ಗೊತ್ತಿರುವ ಭಾಷೆ ಒಂದೇ- ಅಳು. ಆದರೆ, ನಮ್ಮ ಅಕ್ಕ ಪಕ್ಕ, ಬೀದಿ, ಹೊಲ, ರಸ್ತೆಗಳಲ್ಲಿ ಇವತ್ತು ಅಳುವನ್ನು ಎಷ್ಟು ತೃಣಸಮಾನವಾಗಿ ಕಾಣಲಾಗುತ್ತಿದೆಯೆಂದರೆ, ಕೈ ಮುಗಿದು ಬೇಡಿಕೊಂಡರೂ, ಅತ್ತರೂ ಥಳಿತ ನಿಲ್ಲುವುದಿಲ್ಲ. ಸಾಯುವವರೆಗೆ ಹೊಡೆತ, ಬಡಿತ ನಿಲ್ಲಿಸುವುದೂ ಇಲ್ಲ. ಇಂಥ ಸ್ಥಿತಿಯಲ್ಲಿ ಮಕ್ಕಳ ಅಳು ಅರ್ಥವಾಗುವುದಾದರೂ ಹೇಗೆ? ಇವತ್ತು ಎಲ್ಲವೂ ಮನರಂಜನೆಯಾಗತೊಡಗಿದೆ. ಇನ್ನೊಬ್ಬರ ಅಳುವನ್ನೂ ನಗುವನ್ನೂ ಮಾತನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ನಾವು ಜಡವಾಗುತ್ತಿದ್ದೇವೆ.
ನಿನ್ನೆಯಿಂದ ಈ ಮೂರು ಮಕ್ಕಳು ನನ್ನೊಳಗನ್ನು ತೀವ್ರವಾಗಿ ಕಾಡುತ್ತಿದ್ದಾರೆ. ಹಸಿವನ್ನು ತಾಳಲಾರದೇ ಈ ಮಕ್ಕಳು ಎಷ್ಟು ಅತ್ತಿರಬಹುದು? ಆಹಾರವನ್ನು ನಿರೀಕ್ಷಿಸಿ ಈ ಮಕ್ಕಳು ಹೇಗೆ ಕಾದಿರಬಹುದು? ಅಂದಹಾಗೆ, ಪರ ಊರಿನಿಂದ ಬಂದು ನಮ್ಮ ಅಕ್ಕ ಪಕ್ಕ ಬಿಡಾರ ಹೂಡಿರುವ ಕಾರ್ಮಿಕರ ಡೇರೆಗಳಲ್ಲಿ ಇಂಥ ಮಕ್ಕಳು ಈಗಲೂ ಇರಬಹುದು. ಅಲ್ಲಿ ಮಂಗಲ್ ಸಿಂಗ್ ನಂಥ ಕುಡುಕ ಅಪ್ಪನೂ ಇರಬಹುದು. ಧರ್ಮ, ಜಾತಿ, ಭಾಷೆಯನ್ನು ನೋಡದೇ ನಾವು ತುಸು ಜಾಗೃತರಾಗಿರೋಣ. ಮಕ್ಕಳ ಅಳುವನ್ನು ನಿರ್ಲಕ್ಷಿಸದಿರೋಣ.

ನನ್ನ ಸಾಮ್ರಾಜ್ಯದಲ್ಲಿ ಹಸಿವಿನಿಂದ ಒಂದು ನಾಯಿ ಸತ್ತರೂ ಅದಕ್ಕೆ ನಾನು ಹೊಣೆಗಾರನಾಗುತ್ತೇನೆ ಮತ್ತು ದೇವನು ಅದಕ್ಕಾಗಿ ನನ್ನನ್ನು ಹಿಡಿಯುವನು” ಎಂದು ಹೇಳಿದ್ದ 7ನೇ ಶತಮಾನದ ಆಡಳಿತಗಾರ ಖಲೀಫಾ ಉಮರ್ ನಿಜಕ್ಕೂ ಗ್ರೇಟ್.