ಅರಬ್ ಕ್ರಾಂತಿ ಬಳಿಕ ಮೊದಲ ಚುನಾಯಿತ ಅಧ್ಯಕ್ಷರಾದ ಟುನೀಶ್ಯದ ಬಾಜಿ ಖಾಇದ್ ಅಸ್ಸಬ್ಸಿ ನಿಧನ

0
463

ಟೂನಿಸ್, ಜು. 26: ಉತ್ತರ ಆಫ್ರಿಕನ್ ದೇಶ ಟುನೀಷ್ಯದ ಅಧ್ಯಕ್ಷ ಮುಹಮ್ಮದ್ ಬಾಜಿ ಖಾಇದ್ ಅಸ್ಸಬ್ಸಿ ನಿಧನರಾಗಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ದೇಶದ ಪ್ರಜಾಪ್ರಭುತ್ವಪರ ಚುನಾವಣೆಯಲ್ಲಿ ಆಯ್ಕೆಯಾದ ಪ್ರಥಮ ಅಧ್ಯಕ್ಷರು ಇವರು. ಬ್ರಿಟನ್‍ನ ಎಲಿಝಬೆತ್ ರಾಣಿಯನ್ನು ಹೊರತು ಪಡಿಸಿದರೆ ಜಗತ್ತಿನ ಅತಿಹೆಚ್ಚು ವಯಸ್ಸಾದ ರಾಜಕೀಯ ನಾಯಕ ಅಸ್ಸಬ್ಸಿಯಾಗಿದ್ದಾರೆ.

ಕಳೆದ ಜೂನ್‍ನಲ್ಲಿ ಅವರಿಗೆ ಅನಾರೋಗ್ಯ ಕಾಡಿತು. ನಂತರ ಅವರು ಆಸ್ಪತ್ರೆಯಲ್ಲಿದ್ದರು. ಝೈನುಲ್ ಅಬಿದೀನ್ ಬಿನ್ ಅಲಿಯವರನ್ನು 2011ರಲ್ಲಿ ಅಧಿಕಾರದಿಂದ ಕೆಳಗಿಳಿಸಿ ಮೂರು ವರ್ಷದ ಬಳಿಕ ಅಸ್ಸಬ್ಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು. ಇದರೊಂದಿಗೆ ಅವರು ಅರಬ್ ಕ್ರಾಂತಿಯ ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾದರು. ಅಸ್ಸಬ್ಸಿಯವರ ನಿದಾ ಟೋನ್ಸ್ ಮತ್ತು ಇಸ್ಲಾಮಿಕ್ ಪಾರ್ಟಿ ಅನ್ನಹ್ದ ಅಧಿಕಾರಕ್ಕೆ ಬಂದಿತ್ತು. ನಂತರ ಎರಡು ಪಾರ್ಟಿಗಳ ಸಂಬಂಧದಲ್ಲಿ ಬಿರುಕು ಮೂಡಿತ್ತು. ಟೋನ್ಸ್ ನ ನಿಯಂತ್ರಣವನ್ನು ಅಸ್ಸಬ್ಸಿಯ ಪುತ್ರ ವಹಿಸಿಕೊಂಡರು. ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ದೇಶವನ್ನು ಯುವಕರು ಮುನ್ನಡೆಸಬೇಕೆಂದು ಅಸ್ಸಬ್ಸಿ ಹೇಳಿದ್ದರು.