ಮಿನಿ ಕಥೆ

0
2001

ಓರ್ವ ಸತ್ಯವಿಶ್ವಾಸಿ ವೃದ್ಧ ಮಹಿಳೆಯೊಬ್ಬಳು ನಾಸ್ತಿಕನ ಮನೆಯ ಹತ್ತಿರದಲ್ಲೇ ವಾಸವಾಗಿದ್ದಳು. ಯಾವುದೇ ರೀತಿಯ ಘಟನೆಗಳು ಸಂಭವಿಸಿದರೂ ಆಕೆ ದಿನಂಪ್ರತಿ ತನ್ನ ಮನೆಯ ಬಾಗಿಲಿನ ಮುಂಭಾಗದಲ್ಲಿ ನಿಂತು; “ಅಲ್ ಹಮ್ದುಲಿಲ್ಲಾಹ್- ಅಲ್ಲಾಹನಿಗೆ ಸರ್ವಸ್ತುತಿ” ಎಂದು ಜೋರಾಗಿ ಹೇಳುತ್ತಿದ್ದಳು. ಇದನ್ನು ದಾರಿಹೋಕರು ಯಾರು ಗಮನಿಸಿದರೂ ಆಕೆ ತನ್ನ ಪ್ರವೃತ್ತಿಯಲ್ಲಿ ಬದಲಾವಣೆಯನ್ನೇನೂ ತರಲಿಲ್ಲ.

ಆದರೆ ಆಕೆಯ ನೆರೆಮನೆಯಲ್ಲಿ ವಾಸಿಸುತ್ತಿದ್ದ ನಾಸ್ತಿಕನಿಗೆ ಆಕೆಯ ಈ ಉದ್ಘೋಷವು ಕೋಪವು ನೆತ್ತಿಗೇರುವಂತೆ ಮಾಡುತ್ತಿತ್ತು. ಆಕೆ “ಅಲ್ಲಾಹನಿಗೆ ಸರ್ವಸ್ತುತಿ” ಎಂದು ಹೇಳಿ ಮುಗಿಸುವಾಗಲೇ; ಆತ ತನ್ನ ಬಾಗಿಲ ಬಳಿ ನಿಂತು
“ಈ ಪ್ರಪಂಚದಲ್ಲಿ ದೇವರೇ ಇಲ್ಲ” ಎಂದು ಜೋರಾಗಿ ಅರಚುತ್ತಿದ್ದನು.

ಇದು ದಿನನಿತ್ಯದ ವಾಡಿಕೆಯಾಗಿತ್ತು.
ಕೆಲವು ದಿನಗಳುರುಳಿದಾಗ ವೃದ್ಧ ಮಹಿಳೆಗೆ ಸಂಕಷ್ಟದ ದಿನಗಳು ಎದುರಾದವು. ಆಕೆ ಯಾವಾಗಲೂ ಅಲ್ಲಾಹನ ಬಳಿ ತನ್ನನ್ನು ಸಂಕಷ್ಟದಿಂದ ಪಾರು ಮಾಡುವಂತೆ ಕೇಳಿಕೊಳ್ಳುತ್ತಿದ್ದಳು. ರಾತ್ರಿಯ ಬಹುಭಾಗವನ್ನು ಪ್ರಾರ್ಥನೆಯಲ್ಲಿಯೇ ಕಳೆಯುತ್ತಿದ್ದಳು. ಹೀಗಿರುತ್ತಾ ಒಂದು ರಾತ್ರಿ ಆಕೆ ಜೋರಾಗಿ ಈ ರೀತಿ ಪ್ರಾರ್ಥಿಸಿದಳು, “ಓ ಅಲ್ಲಾಹ್ ನನಗೆ ಆಹಾರ ಬೇಕು. ನಾನು ಸಂಕಷ್ಟದಿಂದ ದಿನ ದೂಡುತ್ತಿದ್ದೇನೆ. ಓ  ಅಲ್ಲಾಹ್ ದಯವಿಟ್ಟು ನನಗೆ ಕೆಲವೊಂದು ಆಹಾರ ಸಾಮಗ್ರಿಗಳನ್ನು ಕಳುಹಿಸು. ನಿನ್ನ ಸಹಾಯ ಒದಗಿಸು” ಎಂದು ಪ್ರಾರ್ಥಿಸುತ್ತಾಳೆ.

ಆದರೆ ಆಕೆಯ ಈ ದೊಡ್ಢ ಧ್ವನಿಯ ಪ್ರಾರ್ಥನೆಯು ನಾಸ್ತಿಕನಿಗೆ ಕೇಳುತ್ತದೆ. ಆತ ವೃದ್ಧ ಮಹಿಳೆಯನ್ನು ತಮಾಷೆ ಮಾಡಬೇಕೆಂದು ಇಚ್ಛಿಸಿ ಉಪಾಯ ಹೂಡುತ್ತಾನೆ.

ಮರುದಿನ ವೃದ್ಧ ಮಹಿಳೆಯು ತನ್ನ ಮನೆ ಬಾಗಿಲು ತೆರೆದಾಗ ಒಂದು ದೊಡ್ಡ ಬುಟ್ಟಿಯಲ್ಲಿ ಆಹಾರ ಸಾಮಗ್ರಿಗಳನ್ನು ಕಾಣುತ್ತಾಳೆ. ಆಕೆ ಎಂದಿನಂತೆ “ಅಲ್ ಹಮ್ದುಲಿಲ್ಲಾಹ್ – ಅಲ್ಲಾಹನಿಗೆ ಸರ್ವಸ್ತುತಿ” ಎನ್ನುತ್ತಾ ಸಾಮಾಗ್ರಿಗಳನ್ನು ಎತ್ತಿಕೊಂಡು ಮನೆಯೊಳಗೆ ಪ್ರವೇಶಿಸುತ್ತಾಳೆ.
ಆಗ ನೆರಮನೆಯ‌ ನಾಸ್ತಿಕ ತಾನು ಅಡಗಿದ್ದ ಸ್ಥಳದಿಂದ ಹೊರಬಂದು ಗಹಗಹಿಸಿ ನಗುತ್ತಾ ” ನಾನು ನಿನಗೆ ಹೇಳಿರಲಿಲ್ಲವೇ ದೇವರಿಲ್ಲವೆಂದು. ಈ ಆಹಾರ ಸಾಮಗ್ರಿ ನಾನು ತಂದು ಕೊಟ್ಟಿದ್ದೇ ಹೊರತು ನೀನು ನಂಬಿದ ದೇವರಲ್ಲ” ಎನ್ನುತ್ತಾನೆ.

ಆಗ ವೃದ್ಧ ಮಹಿಳೆಯು ಒಂದೊಮ್ಮೆ ಒಳಗಿನಿಂದ ಹೊರಬಂದು ಜೋರಾಗಿ ಚಪ್ಪಾಳೆ ಬಾರಿಸುತ್ತಾ ಹೀಗೆನ್ನುತ್ತಾಳೆ –
“ಅಲ್ ಹಮ್ದುಲಿಲ್ಲಾಹ್ – ಅಲ್ಲಾಹನಿಗೆ ಸರ್ವಸ್ತುತಿ! ಅವನು ಕೇವಲ ನನಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಲಿಲ್ಲ; ಬದಲಾಗಿ, ಶೈತಾನನೇ ಅದಕ್ಕೆ ಬೆಲೆತೆತ್ತು ನನ್ನ ಬಾಗಿಲ ಮುಂದೆ ತಂದು ಇರಿಸುವಂತೆ ಮಾಡಿದನು”.

ಕೃಪೆ -ಯಂಗ್ ಮುಸ್ಲಿಮ್ ಡಿಜೆಸ್ಟ್