ದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಲಘು ಸ್ಫೋಟ; ಹೈ ಅಲರ್ಟ್

0
487

ಸನ್ಮಾರ್ಗ ವಾರ್ತೆ

ನವದೆಹಲಿ: ಮಧ್ಯ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಶುಕ್ರವಾರ ಸಂಜೆ ಲಘು ಸ್ಫೋಟ ಸಂಭವಿಸಿದ್ದು, ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಮತ್ತು ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎನ್ ಡಿ ಟಿ ವಿ ವರದಿ ಮಾಡಿದೆ.

ವಿಜಯ ಚೌಕ್‌ನಿಂದ ಎರಡು ಕಿಲೋಮೀಟರ್ ದೂರದಲ್ಲಿ ಈ ಸ್ಫೋಟ ನಡೆದಿದ್ದು, ರೈಸೀನ ಹಿಲ್ಸ್ ನಲ್ಲಿಂದು ಸಂಜೆ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪಾದಚಾರಿ ಮಾರ್ಗದಲ್ಲಿ ಈ ಸ್ಪೋಟಕವನ್ನು ಇಡಲಾಗಿತ್ತು, ಸ್ಫೋಟಗೊಂಡ ಸ್ಥಳದ ಹತ್ತಿರದಲ್ಲಿ ನಿಲ್ಲಿಸಿದ್ದ ಐದು ಕಾರುಗಳ ವಿಂಡ್‌ಸ್ಕ್ರೀನ್‌ಗಳಿಗೆ ಹಾನಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಅಬ್ದುಲ್ ಕಲಾಂ ರಸ್ತೆಯಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿರುವುದಾಗಿ ವರದಿಯಾಗಿದೆ.