✍️ ಜಾಸಿಮುಲ್ ಮುತವ್ವ
ದೇವಚರರ ಗುಣ ಸ್ವಭಾವದಂತೆ ನಮ್ಮ ಮಕ್ಕಳು ಬೆಳೆದು ಬರಬೇಕೆಂಬ ಭಾವನೆ ಹೊಂದಿರುವಂತಹ ಮಾತಾಪಿತರು ದೊಡ್ಡ ತಪ್ಪನ್ನು ಮಾಡುತ್ತಿದ್ದಾರೆ. ಯಾವುದೇ ತಪ್ಪು ಮಾಡದ ದೇವಚರರು ನಮ್ಮ ಮಕ್ಕಳು ಎಂಬ ಭಾವನೆ ಇರುವ ಕೆಲವು ತಂದೆ-ತಾಯಂದಿಯರು ತಮ್ಮ ಮಕ್ಕಳ ಗುಣ ಸ್ವಭಾವಗಳು, ಶಿಕ್ಷಣ ಎಲ್ಲವೂ ಹಾಗೆಯೇ ಇರಬೇಕೆಂದು ಭಾವಿಸುತ್ತಾರೆ.
ಮಕ್ಕಳ ಕೆಲವು ಕುಂದು-ಕೊರತೆಗಳು, ಲೋಪಗಳು ಹಲವು ತಂದೆ-ತಾಯಂದಿರನ್ನು ಕಳವಳಗೊಳಿಸಿವೆ. ತಂದೆ- ತಾಯಂದಿರ ಮಾತುಗಳನ್ನು ಕೇಳದಿರುವುದು, ತಮ್ಮ ಸಹೋದರ ಸಹೋದರಿಯರಿಗೆ ಹೊಡೆಯುವುದು, ಪರಸ್ಪರ ಜಗಳ ಕಾಯುವುದು – ಇವೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಮಕ್ಕಳ ಇಂತಹ ವರ್ತನೆಯು ತಂದೆ-ತಾಯಿಯರಿಗೆ ಅಸಹನೆ ಮೂಡಿಸುತ್ತದೆ. ಪ್ರೌಢರಾದ ಮಕ್ಕಳು ಅಧ್ಯಯನದ ವೇಳೆ, ಪರೀಕ್ಷಾ ಸಂದರ್ಭದಲ್ಲಿ ಕಲಿಯುವಾಗ ಆಟವಾಡಿ ಕಾಲಹರಣ ಮಾಡುವುದು, ನಮಾಝ್ನಲ್ಲಿ ಸಮಯ ನಿಷ್ಠೆ ಪಾಲಿಸದಿರುವುದು, ನಮಾಝ್ ಕೂಡ ಮಾಡದಿರುವುದು ಮುಂತಾದ ಗುಣ ಸ್ವಭಾವಗಳನ್ನು ತಮ್ಮ ಮಕ್ಕಳಲ್ಲಿ ಕಂಡಾಗ ಮಾತಾಪಿತರಿಗೆ ಅವರಲ್ಲಿ ಅಸಂತೃಪ್ತಿ, ಅಸಹನೆ ಮೂಡುವುದು ಸಹಜ.
ಮಕ್ಕಳು ಸ್ವಲ್ಪ ಬೆಳೆದು ದೊಡ್ಡವರಾದಂತೆ ಅವರ ವರ್ತನೆಯಲ್ಲಿ ಕೆಟ್ಟ ಸ್ವಭಾವಗಳು ಕಾಣುವಾಗ ತಂದೆ-ತಾಯಂದಿರು ತೀವ್ರ ಕಳವಳಕ್ಕೀಡಾಗುತ್ತಾರೆ. ಆಕೆ ಅಥವಾ ಆತ ತಮ್ಮ ಸ್ನೇಹಿತರ ಜೊತೆ ಅಹಿತಕರವಾದ ಯಾವುದಾದರೂ ಚಟುವಟಿಕೆಯಲ್ಲಿ ಭಾಗಿಯಾದರೆ, ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ನಲ್ಲಿ ಅನಗತ್ಯವಾದ ಯಾವುದನ್ನಾದರೂ ನೋಡುವುದು, ಆಲಿಸುವುದನ್ನು ಕಂಡರೆ ಅದರೊಂದಿಗೆ ಮಕ್ಕಳು ಮತ್ತು ಮಾತಾಪಿತರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ನಂತರ ಅದು ಕುಟುಂಬದ ಹಳಿಯನ್ನು ತಪ್ಪಿಸುತ್ತದೆ.
ಮಕ್ಕಳು ಮಾಡುವ ಪ್ರಮಾದಗಳ ಮೂಲಕ ಮಾತಾಪಿತರ ಮತ್ತು ಮಕ್ಕಳ ನಡುವೆ ಸಂಬಂಧಗಳು ಹಳಸಿದ ಹಲವಾರು ಪ್ರಕರಣಗಳು ನನ್ನ ಮುಂದೆ ಬಂದಿವೆ. ಮಗಳು ಹಿಜಾಬ್ ಧಾರಿಣಿಯಾಗಿರದ ಒಂದೇ ಒಂದು ಕಾರಣಕ್ಕಾಗಿ ಮಗಳೊಂದಿಗೆ ಕೋಪದಿಂದ ಜಗಳ ಮಾಡುತ್ತಿದ್ದ ತಂದೆಯ ಬಗ್ಗೆ ನನಗೆ ತಿಳಿದಿದೆ. ತಂದೆಯು ಮಗಳ ಜೊತೆಗಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಂಡಿದ್ದರು. ಮಗನು ನಮಾಝ್ ಮಾಡಿಲ್ಲ ಮತ್ತು ಇತರ ಹೆಣ್ಣು ಮಕ್ಕಳ ಜೊತೆ ಅನೈತಿಕ ಸಂಪರ್ಕ ಇಟ್ಟುಕೊಂಡಿದ್ದಾನೆಂಬ ಕಾರಣಕ್ಕೆ ಕಳೆದ ಆರು ವರ್ಷಗಳಿಂದ ತಂದೆಯು ಮಗನ ಜೊತೆಗಿನ ಸಂಬಂಧವನ್ನು ಕಡಿದಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ತಂದೆ-ತಾಯಂದಿರು ಕಳೆದ 10 ವರ್ಷಗಳಿಂದ ಮಾತುಕತೆಯನ್ನು ಬಿಟ್ಟು ಬಿಟ್ಟ ಪ್ರಕರಣವು ನನ್ನ ಬಳಿ ಬಂದಿದೆ.
ಮಾತಾಪಿತರು ಮಕ್ಕಳ ಒಳಿತು ಕೆಡುಕುಗಳ ಬಗ್ಗೆ ಅಳೆಯುವುದು, ಮಕ್ಕಳ ತಪ್ಪುಗಳು ಕಂಡು ಬಂದಾಗ ಸಂತೋಷಭರಿತರಾಗುವುದು ಎಂದು ನಾನು ಹೇಳುತ್ತಿಲ್ಲ. ಬದಲಾಗಿ ತಪ್ಪುಗಳು ಕಂಡು ಬಂದಾಗ ನಾವು ಭಾವನಾತ್ಮಕವಾಗಿ ಇರದೆ ವಾಸ್ತವ ಪ್ರಜ್ಞೆಯಿಂದ ಅವರೊಂದಿಗೆ ವರ್ತಿಸಬೇಕು ಎಂದು ನಾನು ಹೇಳಬಯಸುತ್ತೇನೆ. ಮಕ್ಕಳು ಮಾಡುವ ಪ್ರತಿ ತಪ್ಪು ಕಂಡ ಕೂಡಲೇ ನಿಯಂತ್ರಣವನ್ನು ಕಳೆದು ಕೊಂಡು ಕೋಪದಿಂದ, ಉದ್ವೇಗದಿಂದ ನಾವು ವರ್ತಿಸಲು ಕಾರಣ ನಾವು ಒಂದು ರೀತಿ ಭಾವನಾತ್ಮಕ ವ್ಯಕ್ತಿಗಳಾಗಿದ್ದರಿಂದಾಗಿದೆ. ನಮಗಿರುವ ವಾಸ್ತವ ಪ್ರಜ್ಞೆಯ ಕೊರತೆಯಿಂದ ಅವರ ಸಣ್ಣ ತಪ್ಪುಗಳಿಗೆ ಕಠಿಣ ಶಿಕ್ಷೆ ನೀಡಿ, ಅವರ ಎಲ್ಲ ಹಕ್ಕುಗಳನ್ನು ನಿಷೇಧಿಸಿ ಅವರೊಂದಿಗೆ ಕಠಿಣವಾಗಿ ವರ್ತಿಸುತ್ತೇವೆ. ನಾವು ತಪ್ಪನ್ನು ತಿದ್ದಿಕೊಳ್ಳಲು ಅವಕಾಶವನ್ನು ಅವರಿಗೆ ನೀಡುತ್ತಿಲ್ಲ. ತಪ್ಪುಗಳಿಂದ ಅವರು ದೂರ ಹೇಗೆ ಇರಬೇಕೆಂದು ಅವರಿಗೆ ಕಲಿಯಲು ನಾವು ಅವಕಾಶ ನೀಡುವುದಿಲ್ಲ. ಮಕ್ಕಳು ತಪ್ಪು ಮಾಡದ ದೇವಚರರು ಎಂಬ ಭಾವನೆಯಲ್ಲಿ ನಾವು ಅವರನ್ನು ಬೆಳೆಸಲು ಶ್ರಮಿಸುವ ಕಾರಣದಿಂದ ಹೀಗೆಲ್ಲ ಸಂಭವಿಸುತ್ತದೆ.
ನಮ್ಮ ಮಾನಸಿಕ ಸ್ಥಿತಿಯೊಂದಿಗೆ ನ್ಯಾಯದಿಂದ ವರ್ತಿಸಿ, ನಾವೆಲ್ಲರೂ ಮನುಷ್ಯರು ಎಂಬ ಚಿಂತೆಯಿಂದ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಪ್ರವಾದಿವರ್ಯರು(ಸ) ನಮಗೆ ಕಲಿಸಿಕೊಟ್ಟಿದ್ದಾರೆ. “ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಆಣೆ, ನಿಮ್ಮಲ್ಲಿ ಯಾರೂ ತಪ್ಪು ಮಾಡದೆ ಇದ್ದಿದ್ದರೆ ನಿಮ್ಮ ಬದಲಿಗೆ ತಪ್ಪು ಮಾಡಿ ಕೂಡಲೇ ಅಲ್ಲಾಹನನ್ನು ಸ್ಮರಿಸಿ ಪಶ್ಚಾತಾಪ ಪಟ್ಟು ಕ್ಷಮೆ ಯಾಚಿಸುವವರನ್ನು ಮತ್ತು ಅಲ್ಲಾಹನು ಅವರಿಗೆ ಕ್ಷಮೆ ನೀಡುತ್ತಾನೆ, ಇಂತಹ ಒಂದು ವಿಭಾಗವನ್ನು ಅಲ್ಲಾಹನು ಸೃಷ್ಟಿಸುವನು.”
ಪೋಷಕರಾದ ನಮ್ಮ ವೈಯಕ್ತಿಕ ವಿಚಾರದಲ್ಲಿ ನಾವು ಅಳವಡಿಸುವ ರೀತಿಯನ್ನು ಯಾಕೆ ನಮ್ಮ ಮಕ್ಕಳ ವಿಚಾರದಲ್ಲಿ ಅಳವಡಿಸುವುದಿಲ್ಲ? ನಮ್ಮ ಮಕ್ಕಳನ್ನು ಯಾಕೆ ಆ ರೀತಿಯಲ್ಲಿ ಬೆಳೆಸುವುದಿಲ್ಲ? ತಪ್ಪು ಸಂಭವಿಸುವುದಲ್ಲ ಅಪರಾಧ, ಮಾಡಿದ ತಪ್ಪಿನಲ್ಲಿ ಸ್ಥಿರವಾಗಿ ನಿಲ್ಲುವುದು ಅಪರಾಧವಾಗಿದೆ. ಅಲ್ಲಾಹನ ಜೊತೆಗಿನ ಸಂಬಂಧದಲ್ಲಿ ಲೋಪ ಸಂಭವಿಸಿದರೆ ಅಲ್ಲಾಹನೊಡನೆ ಕ್ಷಮೆಯಾಚಿಸಿ, ಜನರ ನಡುವಿನ ಸಂಬಂಧದಲ್ಲಿ ತಪ್ಪು ಸಂಭವಿಸಿದರೆ ಅವರೊಂದಿಗೆ ಕ್ಷಮೆಯಾಚಿಸಿ ಜೀವಿಸಲು ನಮ್ಮ ಮಕ್ಕಳನ್ನು ಅಭ್ಯಾಸ ಮಾಡಬೇಕು. ಅದರ ಹೊರತಾಗಿ ಅವರು ತಪ್ಪು ಸಂಭವಿಸದ ಮಲಾಯಕ್ಗಳು ಎಂಬಂತೆ ಅವರೊಂದಿಗೆ ವರ್ತಿಸುವುದಲ್ಲ.
ದುರ್ಬಲ ನಿಮಿಷದಲ್ಲಿ ಪ್ರವಾದಿಗಳಿಗೂ ಪ್ರಮಾದಗಳು ಸಂಭವಿಸಿವೆ. ಅಲ್ಲಾಹನು ಅದನ್ನು ತಿದ್ದಿ ಸರಿಪಡಿಸಿದ ಸಂದರ್ಭಗಳು ವಿವರಿಸಲ್ಪಟ್ಟಿವೆ. ಅದರಿಂದ ಮಹತ್ತರವಾದ ಶಿಕ್ಷಣ ನೀಡಲು ಮತ್ತು ನಮ್ಮಲ್ಲಿಯೂ ತಪ್ಪುಗಳು, ಪ್ರಮಾದಗಳು, ಜಿಪುಣತೆ ಮುಂತಾದವುಗಳು ಬರಬಹುದು ಎಂದು ಸೂಚಿಸಲು ತಿಳಿಸಲಾಗಿದೆ. ಆದಿ ಪಿತ ಆದಮ್ರ ಕುರಿತು ಕುರ್ಆನ್ ಹೀಗೆ ಹೇಳುತ್ತದೆ:
“ಆದಮ್ ತನ್ನ ಪ್ರಭುವಿನೊಡನೆ ಅವಿಧೇಯತೆ ತೋರಿದರು, ಅವರು ದಾರಿ ತಪ್ಪಿದರು” ಎಂದು ಒಂದೆಡೆ ಹೇಳಿದರೆ, ಮತ್ತೊಂದೆಡೆ “ಅವರು ಮರೆತು ಹೋದರು, ಅವರಲ್ಲಿ ನಾವು ಮನೋದಾರ್ಢ್ಯತೆ ಕಂಡಿಲ್ಲ” ಎಂದು ಹೇಳಲಾಗಿದೆ. ಪ್ರವಾದಿ ನೂಹ್(ಅ) ವಿಷಯದಲ್ಲಿ ಅವರು ಹೇಳಿದರು,
“ನನ್ನ ಪ್ರಭು, ನನಗೆ ತಿಳಿದಿರದ ವಿಚಾರದಲ್ಲಿ ನಾನು ನಿನ್ನೊಂದಿಗೆ ಅರಿಯದೆ ಯಾಚಿಸುವುದರಿಂದ ನಾನು ನಿನ್ನಿಂದ ಅಭಯ ಯಾಚಿಸುತ್ತೇನೆ.” ಪ್ರವಾದಿ ದಾವೂದ್(ಅ)ರ ವಿಚಾರದಲ್ಲಿ,
“ದಾವೂದ್ರಿಗೆ ನಾವು ಅವರನ್ನು ಪರೀಕ್ಷಿಸುತ್ತಿದ್ದೇವೆ ಎಂಬುದು ಅವರಿಗೆ ಅರಿವಾಯಿತು.” ಪ್ರವಾದಿ ಸುಲೈಮಾನ್(ಅ),
“ನಾವು ಸುಲೈಮಾನ್ರನ್ನು ಪರೀಕ್ಷಿಸಿದೆವು.” ಯೂಸುಫ್(ಅ),
“ಆಕೆ ಅವರ ಜೊತೆ ಅನುರಾಗ ಹೊಂದಿದಳು, ತನ್ನ ಪ್ರಭುವಿನ ಸಹಾಯವಿಲ್ಲದಿದ್ದರೆ ಅವರು ಆಕೆಯ ಮೋಹಕ್ಕೆ ಒಳಗಾಗುತ್ತಿದ್ದರು.” ಪ್ರವಾದಿ ಮೂಸಾ(ಅ) ಅವರು ಹೇಳಿದರು,
“ಪ್ರಭು ನಾನು ನನ್ನೊಂದಿಗೆ ಅಕ್ರಮ ಎಸಗಿದೆ, ನನ್ನನ್ನು ನೀನು ಕ್ಷಮಿಸು.” ಪ್ರವಾದಿ ಮುಹಮ್ಮದ್(ಸ) ಕುರಿತು ಓರ್ವ ಕುರುಡನು ಅವರ ಬಳಿ ಬಂದಾಗ ಅವರ ಮುಖವೇ ಬದಲಾಯಿತು.
ನಿಷಿದ್ಧವೆಂದು ಅರಿತೂ ಮದ್ಯಪಾನ ಮಾಡಿದ ಕೆಲವು ಸಹಾಬಿಗಳು ಇದ್ದರು, ನುಐಮಾನ್ ಬಿನ್ ಅನ್ಸಾರಿಯಂತೆ. ಮದ್ಯ ಸೇವಿಸಿದ್ದಕ್ಕಾಗಿ ಪ್ರವಾದಿವರ್ಯರು(ಸ) ಶಿಕ್ಷೆ ವಿಧಿಸಿದರು. ಖುದಾಮತ್ ಬಿನ್ ಮದ್ಊನ್(ರ) ಮದ್ಯಪಾನ ಮಾಡಿದ್ದ ಕ್ಕಾಗಿ ಹ. ಉಮರ್(ರ) ಶಿಕ್ಷೆ ವಿಧಿಸಿದ್ದರು. ಈ ಇಬ್ಬರೂ ಸಹಾಬಿಗಳು ಬದ್ರ್ ಯುದ್ಧ ಮಾಡಿದವರು ಎಂಬುದು ಗಮನಾರ್ಹ. ತರಬೇತಿಯ ಸರಿ ತಪ್ಪುಗಳ ಬಗ್ಗೆ ನಾಲ್ಕು ರೀತಿಯ ನೀತಿ ಸಂಹಿತೆಗಳಿವೆ. ಅದಕ್ಕೆ ಕುರ್ಆನ್ನ ಪರಾಮರ್ಶೆ ಹಾಗೂ ಸಹಾಬಿಗಳ ಉದಾಹರಣೆಗಳನ್ನು ನಮ್ಮ ಮುಂದೆ ಇರಿಸಿದೆ:
ಮಕ್ಕಳನ್ನು ಸನ್ಮಾರ್ಗದಲ್ಲಿ ಸ್ಥಿರವಾಗಿರಲು ಸಾಧ್ಯವಾದಷ್ಟು ಶ್ರಮಿಸಿರಿ. ಅವರು ತಪ್ಪು ಮಾಡಿದರೆ ಅದನ್ನು ತಪ್ಪು ಎಂದು ನಾವು ಅಂಗೀಕರಿಸಬೇಕು. ತಪ್ಪು ಸಂಭವಿಸಿ ದರೆ ಪಶ್ಚಾತಾಪ ಪಡಲು, ಜನರೊಂದಿಗೆ ಕ್ಷಮೆ ಯಾಚಿಸಲು ಅವರನ್ನು ಪ್ರೇರೇಪಿಸಿರಿ.
ಬಹಿರಂಗವಾಗಿ ಧಿಕ್ಕಾರ ಸ್ವಭಾವದಿಂದ ತಪ್ಪುಗಳನ್ನು ಮಾಡಬೇಡಿ ಎಂದು ಮಕ್ಕಳಿಗೆ ಬೋಧಿಸಿರಿ. ತಪ್ಪುಗಳಿಂದ ದೂರ ಇರಲು ಬೇಕಾದ ಸಲಹೆ ನಿರ್ದೇಶನಗಳಿಗೆ ಮಾತಾಪಿತರನ್ನು ಅಥವಾ ಅವರಿಗೆ ಈ ವಿಚಾರದಲ್ಲಿ ನೆರವಾಗಲು ಸಹಾಯವಾಗುವ ತಜ್ಞರನ್ನು ಸಂಪರ್ಕಿಸಲು ಮಕ್ಕಳೊಂದಿಗೆ ಪ್ರೀತಿಯಿಂದ ಹೇಳಬೇಕು.












