ಕೇಂದ್ರ ಸರಕಾರ ರಾಷ್ಟ್ರಧ್ವಜವನ್ನು ಅಪಮಾನಿಸಿದ ದೀಪ್ ಸಿಧುವನ್ನು ಬಂಧಿಸಿಲ್ಲ; ಬದಲಾಗಿ ಬಂಧಿಸಿದ್ದು 200 ರೈತರನ್ನು: ಶಿವಸೇನೆ ಟೀಕೆ

0
555

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಕೆಂಪು ಕೋಟೆಯಲ್ಲಿ ನಡೆದ ದಾಳಿಯ ಸೂತ್ರಧಾರನೆಂದು ಶಂಕಿಸಲಾದ ದೀಪ್ ಸಿಧು ಬಂಧನ ನಡೆಯದ್ದಕ್ಕಾಗಿ ಶಿವಸೇನೆ ಕೇಂದ್ರ ಸರಕಾರವನ್ನು ಟೀಕಿಸಿದೆ.

ಸಂಸತ್ತಿನಲ್ಲಿ ಮಾತನಾಡಿದ ಶಿವಸೇನೆಯ ಸಂಸದ ಸಂಜಯ್ ರಾವತ್ ಸರಕಾರವನ್ನು ಟೀಕಿಸಿದ್ದು ರೈತರ ಹೋರಾಟವನ್ನು ಅಪಮಾನಿಸುವುದು ಸರಿಯಲ್ಲ ಎಂದಿದ್ದಾರೆ. ತ್ರಿವರ್ಣ ಧ್ವಜಕ್ಕೆ ನಡೆದಿರುವ ಅಪಮಾನದಲ್ಲಿ ಪ್ರಧಾನಿಯಂತೆ ಎಲ್ಲರಿಗೂ ನೋವಿದೆ. ಆದರೆ ಧ್ವಜವನ್ನು ಅಪಮಾನಿಸಿದ ವ್ಯಕ್ತಿಯನ್ನು ಬಂಧಿಸಲು ಸರಕಾರ ಶ್ರಮಿಸುವುದಿಲ್ಲ.

ದೀಪ್ ಸಿಧು ಎಲ್ಲಿದ್ದಾರೆ. ಆತನನ್ನು ಈವರೆಗೆ ಯಾಕೆ ಬಂಧಿಸಲಾಗಿಲ್ಲ. ಆದರೆ, 200ರಷ್ಟು ರೈತರನ್ನು ಬಂಧಿಸಲಾಯಿತು ಎಂದು ರಾವತ್ ಹೇಳಿದರು. ದೇಶದ ಎಲ್ಲ ಜನರನ್ನೂ ದೇಶದ್ರೋಹಿಗಳಾಗಿ ಚಿತ್ರಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದರು.