ಬಾಬರಿ: ಆಕ್ಷೇಪ ಮುಕ್ತ ತೀರ್ಪು ಸಾಧ್ಯವಿತ್ತೇ?

0
2010

ಸನ್ಮಾರ್ಗ ವಿಶೇಷ ಸಂಪಾದಕೀಯ

ಅಯೋಧ್ಯೆಯ 2.77 ಎಕರೆ ನಿವೇಶನದ ವಿವಾದವನ್ನು ಸುಪ್ರೀಮ್ ಕೋರ್ಟು ಇತ್ಯರ್ಥಪಡಿಸಿರುವ ರೀತಿಗೆ ವ್ಯಕ್ತವಾಗಿರುವ ಆಕ್ಷೇಪಗಳನ್ನು ತಕ್ಷಣದ ಆವೇಶವೆಂದೋ ಭಾವುಕತೆಯೆಂದೋ ಕಡೆಗಣಿಸಿ ಬಿಡುವುದು ಸಲ್ಲ. ಹಾಗಂತ, ಉಭಯ ಕಕ್ಷಿಗಳನ್ನೂ ಸಮಾನವಾಗಿ ತೃಪ್ತಿಪಡಿಸಬಲ್ಲ ಇತ್ಯರ್ಥ ಸಾಧ್ಯವಿತ್ತೇ ಎಂಬ ಪ್ರಶ್ನೆ ಸಹಜವಾದುದು. ಒಂದುವೇಳೆ, ಅದು ಸಾಧ್ಯವಿರುತ್ತಿದ್ದರೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿಗೆ ಪ್ರಕರಣ ಮುಕ್ತಾಯವನ್ನು ಕಾಣಬೇಕಿತ್ತು. ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಕ್ಕೆ ಈ ವಿವಾದಿತ 2.77 ಎಕರೆ ಭೂಮಿಯನ್ನು ಅಲಹಾಬಾದ್ ಹೈಕೋರ್ಟ್ ಸಮಾನವಾಗಿ ಹಂಚುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸಿತ್ತು. ಆಗಲೂ ಆಕ್ಷೇಪ ವ್ಯಕ್ತವಾಗಿತ್ತು. ಮೂರೂ ಕಕ್ಷಿಗಳೂ ಈ ಇತ್ಯರ್ಥ ಕ್ರಮವನ್ನು ಒಪ್ಪಿರಲಿಲ್ಲ. ಹಾಗಂತ,

ಈಗಿನ ತೀರ್ಪೂ ಆಕ್ಷೇಪ ರಹಿತವೋ ವಿವಾದ ರಹಿತವೋ ಆಗಿಲ್ಲ. ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕ್ರಿಸ್ತಪೂರ್ವ ರಾಮಾಣಯದ ಕಾಲದಿಂದ ಹಿಡಿದು ಮೀರ್ ಬಾಖಿ 1528ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿರುವಲ್ಲಿವರೆಗೆ, ಅಲ್ಲಿಂದ ಪ್ರಥಮ ಹಿಂದೂ-ಮುಸ್ಲಿಮ್ ಘರ್ಷಣೆ ನಡೆದ 1558ರ ವರೆಗೆ, ಅಲ್ಲಿಂದ 1949ರಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳನ್ನು ಬಾಬರಿ ಮಸೀದಿಯ ಒಳಗಡೆ ಸ್ಥಾಪಿಸಿದ ಘಟನೆಯ ವರೆಗೆ ಮತ್ತು ಅಲ್ಲಿಂದ 1992ರ ಮಸೀದಿ ಧ್ವಂಸ ಕೃತ್ಯದ ವರೆಗೆ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ನಿವೇಶನವು ಸರ್ಕಾರಿ ಭೂಮಿ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಬಾಬರಿ ಮಸೀದಿಯನ್ನು ಕಟ್ಟಲು ದೇವಾಲಯವನ್ನು ಕೆಡವಲಾಗಿದೆಯೆಂಬ ವಾದವನ್ನು ಭಾರತೀಯ ಪುರಾತತ್ವ ಇಲಾಖೆಯು ದೃಢಪಡಿಸಿಲ್ಲ ಎಂಬುದು ಈ ವೇಳೆ ಸ್ಪಷ್ಟವಾಗಿದೆ. ಅದೇವೇಳೆ, ಮಸೀದಿ ಇರುವ ಸ್ಥಳ ತಮಗೆ ಮಾತ್ರ ಸೇರಿತ್ತೆಂಬುದನ್ನು ನಿರೂಪಿಸಲು ಸುನ್ನಿ ವಕ್ಫ್ ಮಂಡಳಿ ವಿಫಲವಾಗಿರುವುದನ್ನೂ ನ್ಯಾಯಾಲಯ ಕಂಡುಕೊಂಡಿದೆ. ಹಾಗೆಯೇ, ವಿವಾದಿತ ನಿವೇಶನದ ಹೊರ ಆವರಣವು ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲು ಹಿಂದೂ ಕಕ್ಷಿದಾರರು ಯಶಸ್ವಿಯಾಗಿರುವುದನ್ನು ನ್ಯಾಯಾಧೀಶರು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಅನ್ನುವುದಕ್ಕೆ ಪುರಾವೆಗಳಿರುವುದೂ ಗೊತ್ತಾಗಿದೆ. ಬಹುಶಃ, ಮುಖ್ಯ ಪ್ರಶ್ನೆ ಎದುರಾಗುವುದೂ ಇಲ್ಲೇ. ಬಾಬರಿ ಮಸೀದಿಯ ಮೂರು ಗುಮ್ಮಟಗಳ ಪೈಕಿ ಮಧ್ಯದ ಗುಮ್ಮಟದ ಕೆಳಗಡೆ ಶ್ರೀರಾಮನ ಜನನವಾಗಿದೆಯೆಂಬುದು ಹಿಂದೂ ಕಕ್ಷಿಗಳ ವಾದ. 1992ರಲ್ಲಿ ಮಸೀದಿಯನ್ನು ಧ್ವಂಸಗೈದು ಶ್ರೀರಾಮದ ವಿಗ್ರಹವನ್ನು ಈ ಗುಂಬಜದ ಕೆಳಗಡೆ ಸ್ಥಾಪಿಸಲಾಗಿತ್ತು. ಆದರೆ,

ಈ ನಿರ್ದಿಷ್ಟ ಜಾಗದಲ್ಲೇ ಶ್ರೀರಾಮನ ಜನನವಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸುಲಭ ಸಾಧ್ಯವಲ್ಲ. ಬಹುಶಃ, ಅಲಹಾಬಾದ್ ಹೈಕೋರ್ಟು 2010ರಲ್ಲಿ ಈ ನಿವೇಶನವನ್ನು ಮೂರು ಪಾಲು ಮಾಡಿ ಹಂಚಲು ನಿರ್ಧರಿಸಿದುದಕ್ಕೆ ಇದುವೇ ಕಾರಣ ಇರಬೇಕು. ಸುಪ್ರೀಮ್ ಕೋರ್ಟ್‍ನ ಮುಂದೆಯೂ ಇದೇ ಸಮಸ್ಯೆ ಎದುರಾಗಿರುವಂತಿದೆ. ಆದ್ದರಿಂದ, ಅದು ಸತ್ಯಾಂಶ, ಸಾಕ್ಷ್ಯ, ಮೌಖಿಕ ವಾದಗಳನ್ನಷ್ಟೇ ತನ್ನ ತೀರ್ಪಿಗೆ ಆಧಾರವಾಗಿ ಬಳಸಿಕೊಳ್ಳದೇ ಇತಿಹಾಸ, ಪುರಾತತ್ವ ಶಾಸ್ತ್ರ, ಧರ್ಮ ಮತ್ತು ನಂಬಿಕೆಗಳನ್ನೂ ಆಧಾರವಾಗಿ ಪರಿಗಣಿಸಿರುವಂತಿದೆ. ಅದಕ್ಕಾಗಿ ವಾಲ್ಮೀಕಿ ರಾಮಾಯಣವನ್ನು ಅದು ಪರಿಶೀಲಿಸಿದೆ. ಸ್ಕಂದ ಪುರಾಣದ ವೈಷ್ಣವ ಕಾಂಡದಲ್ಲಿ ಆಧಾರವನ್ನು ಹುಡುಕಿದೆ. ವೈಷ್ಣವ ಕಾಂಡದ ಶ್ಲೋಕಗಳನ್ನು ಎತ್ತಿಕೊಂಡು ರಾಮನ ಜನನ ಸ್ಥಾನವು ಯಾವ ದಿಕ್ಕಿನಲ್ಲಿ ಬರುತ್ತದೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಒಂದು ರೀತಿಯಲ್ಲಿ, ವಿವಾದಿತ ನಿವೇಶನವನ್ನು ನಿರ್ದಿಷ್ಟವಾಗಿ ಇಂಥವರಿಗೇ ಎಂದು ಹಂಚಲು ಅಸಾಧ್ಯವೆಂದು ಅನಿಸಿದಾಗ ಹಿಂದೂ ಧರ್ಮೀಯರ ನಂಬಿಕೆ, ವಿಶ್ವಾಸ, ಆಚರಣೆಗಳನ್ನು ಹೆಚ್ಚುವರಿ ಪುರಾವೆಗಳಾಗಿ ಇಲ್ಲಿ ಅವಲಂಬಿಸುವ ಅನಿವಾರ್ಯತೆ ಎದುರಾಯಿತು ಅನ್ನುವ ಭಾವ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ. ಹಿಂದೂಗಳ ನಂಬಿಕೆ ಮತ್ತು ವಿಶ್ವಾಸಗಳನ್ನು ತೀರ್ಪಿನ ವೇಳೆ ಪರಿಗಣಿಸಲಾಗಿರುವುದನ್ನು ತೀರ್ಪಿನಲ್ಲೇ ಹೇಳಿರುವುದರಿಂದ ಇದು ಸ್ಪಷ್ಟ. ನಿಜವಾಗಿ,

ಸುಪ್ರೀಮ್ ಕೋರ್ಟಿನ ತೀರ್ಪು 2019 ನವೆಂಬರ್ 9ರ ಶನಿವಾರದಂದು ಹುಟ್ಟಿಕೊಂಡು ಅಂದೇ ಅಂತ್ಯ ಕಾಣುವ ಒಂದಲ್ಲ. ಈ ತೀರ್ಪು ಮುಂದೆ ಇಂಥದ್ದೇ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮತ್ತೆ ಮತ್ತೆ ಉಲ್ಲೇಖಕ್ಕೆ ಒಳಗಾಗಬಹುದು. ನ್ಯಾಯಾಲಯದಲ್ಲಿ ನಡೆಯುವ ವಾದಗಳ ಸಂದರ್ಭದಲ್ಲಿ ಈ ತೀರ್ಪು ಆಧಾರವಾಗಿ ಬಳಸಲ್ಪಡಬಹುದು. ಅಲ್ಲದೆ, ಯಾವುದೇ ವಾದವನ್ನು ಮಾಡುವಾಗ ಅದಕ್ಕೆ ಪೂರಕವಾಗಿ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವುದು ಕೋರ್ಟು-ಕಲಾಪಗಳಲ್ಲಿ ಸಾಮಾನ್ಯ ರೂಢಿ. ಹೀಗಿರುವಾಗ, ನಂಬಿಕೆ-ವಿಶ್ವಾಸಗಳ ಆಧಾರದಲ್ಲಿ ಕೋರ್ಟಿನಲ್ಲಿ ವಾದಿಸುವವರಿಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಆಧಾರವಾಗಿ ಬಳಕೆಯಾಗದೇ? ಅಂಥ ಸಂದರ್ಭದಲ್ಲಿ ನ್ಯಾಯಾಲಯ ಏನು ಮಾಡಬಹುದು. ಅಂದಹಾಗೆ,

ಬಾಬರಿ ಮಸೀದಿ ಇರುವ 2.77 ಎಕರೆ ನಿವೇಶನವೊಂದೇ ಈ ದೇಶದ ಏಕೈಕ ವಿವಾದಿತ ಪ್ರದೇಶ ಅಲ್ಲ. ಬಾಬರಿಯ ಮೇಲೆ ಹಕ್ಕು ಸ್ಥಾಪಿಸಿ ಕೋರ್ಟು ಮೆಟ್ಟಿಲೇರಿದ ಮಂದಿ ಇಂಥ ಇನ್ನಿತರ ಸ್ಥಳಗಳ ಪಟ್ಟಿಗಳನ್ನೂ ಹೊಂದಿದ್ದಾರೆ. ಈ ಹಿಂದೆ ಅಸಂಖ್ಯ ಬಾರಿ ಅದನ್ನು ದೇಶದ ಮುಂದೆ ಸ್ಪಷ್ಟಪಡಿಸಿಯೂ ಇದ್ದಾರೆ. ಇವಲ್ಲದೇ, ಬಹುಧರ್ಮೀಯ ಈ ದೇಶದ ಉದ್ದಕ್ಕೂ ಇಂಥ ಇನ್ನಷ್ಟು ವಿವಾದಗಳು ಅನೇಕ ಇರಬಹುದು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮ ಈ ದೇಶವನ್ನು ಪ್ರವೇಶಿಸುವ ಮೊದಲೇ ಈ ದೇಶದಲ್ಲಿ ಅನೇಕ ವಿವಾದಗಳಿದ್ದುವು. ಬೌದ್ಧರು, ಜೈನರು ಇಲ್ಲಿದ್ದರು. ಅವರಿಗೂ ಇಲ್ಲಿನ ಇತರ ಪಂಥಗಳಿಗೂ ನಡುವೆ ಘರ್ಷಣೆ ನಡೆದಿರುವುದು ಮತ್ತು ಬೌದ್ಧರು ನಿಧಾನಕ್ಕೆ ನೆಲೆ ಕಳಕೊಂಡಿರುವುದೂ ಇಲ್ಲಿನ ಇತಿಹಾಸವಾಗಿ ಗುರುತಿಗೀಡಾಗಿದೆ. ಅದೇಷ್ಟೋ ಬಸದಿಗಳು, ಬೌದ್ಧ ವಿಹಾರಗಳು ಇನ್ನಾರದೋ ಪಾಲಾಗಿವೆ. ಮಾತ್ರವಲ್ಲ, ಅವು ಇನ್ನೊಂದು ಧರ್ಮದ ಆರಾಧನಾ ಕ್ಷೇತ್ರವಾಗಿ ಪರಿವರ್ತನೆಗೊಂಡದ್ದೂ ಇದೆ. ಒಂದುವೇಳೆ, ಸುಪ್ರೀಮ್ ಕೋರ್ಟಿನ ಈ ತೀರ್ಪನ್ನೇ ಆಧಾರವಾಗಿಸಿಕೊಂಡು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸಗಳ ಹೆಸರಲ್ಲಿ ಹಕ್ಕು ಸ್ಥಾಪನೆಗೆ ಹೊರಡುವ ಪ್ರಯತ್ನಗಳು ಉಂಟಾದರೆ ಅದನ್ನು ಹೇಗೆ ನಿಭಾಯಿಸಬಹುದು? ಅಂದಹಾಗೆ,

ಈ ವಿಷಯದಲ್ಲಿ ಸುಪ್ರೀಮ್ ಕೋರ್ಟು ಯಾವ ತೀರ್ಪನ್ನು ನೀಡುತ್ತಿದ್ದರೂ ಅದು ಆಕ್ಷೇಪ ಮುಕ್ತವಾಗಿರುತ್ತಿರಲಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳುತ್ತಲೇ ಹಿಂದೂಗಳ ನಂಬಿಕೆ, ವಿಶ್ವಾಸವನ್ನು ತೀರ್ಪಿಗೆ ಆಧಾರವಾಗಿಸಿಕೊಂಡಿರುವ ಕೋರ್ಟಿನ ನಡೆಯು ಇತ್ಯರ್ಥದ ಒಟ್ಟು ಗೌರವಕ್ಕೆ ಕುಂದುಂಟು ಮಾಡಿದೆ ಎನ್ನಬೇಕಾಗುತ್ತದೆ. ಅಷ್ಟಕ್ಕೂ, ಈ ತೀರ್ಪು ಆಕ್ಷೇಪ ಮುಕ್ತವೋ ಎಂಬ ಜಿಜ್ಞಾಸೆಯ ಆಚೆಗೆ ದೀರ್ಘ ವಿವಾದವೊಂದರಿಂದ ದೇಶವನ್ನು ಮುಕ್ತಗೊಳಿಸಿದ ಸಂದರ್ಭವೆಂಬ ನೆಲೆಯಲ್ಲಿ ಸುಪ್ರೀಮ್ ಕೋರ್ಟಿನ ಈ ತೀರ್ಪನ್ನು ಪರಿಗಣಿಸಬೇಕಾಗಿದೆ. ನಿಜವಾಗಿ,

ಸುಪ್ರೀಮ್ ಕೋರ್ಟು ನೀಡುವ ಯಾವುದೇ ತೀರ್ಪು ಗೌರವಾರ್ಹವಾದುದು ಮತ್ತು ನ್ಯಾಯಾಂಗದ ದೃಷ್ಟಿಯಲ್ಲಿ ಅಂತಿಮವಾದುದು. ಇದರರ್ಥ ತೀರ್ಪು ಪ್ರಶ್ನಾತೀತ ಎಂದಲ್ಲ. ಪ್ರಶ್ನಿಸುತ್ತಲೇ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಬೇಕಾದ ಸಾಂವಿಧಾನಿಕ ಪ್ರಬುದ್ಧತೆಯನ್ನು ಭಾರತೀಯರು ತೋರಬೇಕಾಗಿದೆ ಮತ್ತು ಬಾಬರಿ ತೀರ್ಪುಗೆ ಸಂಬಂಧಿಸಿ ಅದನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಭಾರತೀಯರು ತೋರಿಸಿಯೂ ಇದ್ದಾರೆ. ಬಾಬರಿ ತೀರ್ಪಿನ ಬಳಿಕ ಈ ದೇಶದ ಮುಸ್ಲಿಮರು ಮತ್ತು ಹಿಂದೂಗಳು ತೋರಿದ ಸಂಯಮ, ಕಾನೂನಿಗೆ ವ್ಯಕ್ತಪಡಿಸಿದ ನಿಷ್ಠೆ ಮತ್ತು ತೋರಿದ ಶಾಂತಿಪ್ರಿಯತೆಯು ಶ್ಲಾಘನಾರ್ಹವಾದುದು. ತೀರ್ಪು ತನ್ನ ಪರವಿದ್ದರೂ ವಿರುದ್ಧವಿದ್ದರೂ ತಾನು ತೀರ್ಪನ್ನು ಗೌರವಿಸುತ್ತೇನೆ ಅನ್ನುವ ಪ್ರಬುದ್ಧ ಸಂದೇಶವನ್ನು ಈ ದೇಶದ ಮುಸ್ಲಿಮರು ರವಾನಿಸಿದ್ದಾರೆ. ವಿಜಯೋತ್ಸವ ಆಚರಿಸದೇ ಹಿಂದೂಗಳೂ ಸಂಯಮ ಪಾಲಿಸಿದ್ದಾರೆ. ಇದುವೇ ಈ ದೇಶದ ಸೌಂದರ್ಯ. ಇದು ಸದಾಕಾಲ ಉಳಿಯಲಿ. ಅಶಾಂತಿ ಅಳಿಯಲಿ.