ಟಿಪ್ಪು ಹಿರಿಮೆಗೆ ಮಸಿ ಬಳಿಯಲು ಸಾಧ್ಯವೇ?

0
267
  • ಟಿ ಪಿ. ಸಾಯಿನಾಥ್ ಟಿ
    ಹಿರಿಯ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ

‘ಅಕ್ಟರ್, ದಾರಾ ಶಿಕೋ ಹಾಗೂ ಟಿಪ್ಪು ಸುಲ್ತಾನ್‌ನಂತಹವರು ಹೀರೊಗಳೆಂದು ಪರಿಗಣಿಸಲ್ಪಡಬೇಕೇ ವಿನಾ ಖಳನಾಯಕರಾಗಿ ಅಲ್ಲ ಎನ್ನುವುದು ನನ್ನ ಅಭಿಪ್ರಾಯ.’

‘ಟಿಪ್ಪುವಿನ ಬಗ್ಗೆ ಹೆಚ್ಚೆಚ್ಚು ಓದಿದಷ್ಟೂ ನನಗೆ ಆತನ ವ್ಯಕ್ತಿತ್ವದ ಹಿರಿಮೆ ಮನವರಿಕೆಯಾಗಿದೆ.’
‘…(ಟಿಪ್ಪು ಸುಲ್ತಾನ್) ಮಾತ್ರವೇ ಬ್ರಿಟಿಷರ ವಿರುದ್ಧ ಹೋರಾಡುತ್ತಾ ಮಡಿದ ರಾಜಕುಮಾರ’. ‘ಬ್ರಿಟಿಷರ ವಿರುದ್ಧ ಹೋರಾಡುವುದಷ್ಟಕ್ಕೇ ಟಿಪ್ಪು ತೃಪ್ತನಾಗಲಿಲ್ಲ, ಶಂಕಿತರಿಗೆ ಚಿತ್ರಹಿಂಸೆ ನೀಡುವುದನ್ನೂ ಸಾರ್ವಜನಿಕ ಕೆಲಸಗಳಿಗೆ ಜನರನ್ನು ಬಲವಂತವಾಗಿ ಕೂಲಿಗಳನ್ನಾಗಿ ಬಳಸಿಕೊಳ್ಳುವುದನ್ನೂ ವಿರೋಧಿಸಿದ್ದ. ಈತ ಪಾನ ನಿಷೇಧವನ್ನು ಜಾರಿಗೆ ತಂದ. ಮರಗಳನ್ನು ಕಡಿಯುವುದನ್ನು ವಿರೋಧಿಸಿದ. ಪ್ರತಿ ನಾಲ್ಕು ಮೈಲಿಗೆ ಒಂದು ಶಾಲೆಯನ್ನು ತೆರೆಯಲು ಯತ್ನಿಸಿದ. ಯಾವಾಗ ಶಸ್ತ್ರ ಉತ್ಪಾದನಾ ಕಾರ್ಖಾನೆಯಿಂದ ಕಾವೇರಿ ನದಿ ಕಲುಷಿತವಾಗುತ್ತಿದೆ ಎಂದು ಗೊತ್ತಾಯಿತೋ ತಕ್ಷಣ ಆತ ಆ ಕಾರ್ಖಾನೆಯನ್ನೇ ಸ್ಥಳಾಂತರಿಸಿದ. ಪರಿಸರವಾದಿಗಳಿಗೆ ಮಾದರಿ ಎನ್ನಬಹುದಾದ ರಾಜನೊಬ್ಬ ಅವನೊಳಗಿದ್ದ’.

‘ಭಾರತದ ರಾಜರುಗಳ ಪೈಕಿ ಟಿಪ್ಪು ಮಾತ್ರವೇ ವಿಶ್ವದೃಷ್ಟಿ ಉಳ್ಳವನಾಗಿದ್ದ.’ `ಟಿಪ್ಪುವಿನ ಮರಣದಿಂದಾಗಿ ಭಾರತದ ಸ್ವಾತಂತ್ರ‍್ಯ ಒಂದೂವರೆ ಶತಮಾನದಷ್ಟು ಮುಂದೆ ಹೋಯಿತು’.

ಈ ಮೇಲಿನ ಹೇಳಿಕೆಗಳೆಲ್ಲವೂ ಕರ್ನಾಟಕದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪಠ್ಯ ಪುಸ್ತಕಗಳ ಮೇಲೆ ಬಿಜೆಪಿ ನೇತೃತ್ವದ ಸರ್ಕಾರ ನಡೆಸಿದ ದೌರ್ಜನ್ಯಕ್ಕೆ ಪ್ರತಿಯಾಗಿ ತೂರಿಸಲು ಯತ್ನಿಸುತ್ತಿರುವ ಟಿಪ್ಪು ಸುಲ್ತಾನನ ಬಗೆಗಿನ ಪರಿಷ್ಕೃತ ಅಧ್ಯಾಯದಲ್ಲಿ ಇರುವಂತಹವಲ್ಲ. ಅಥವಾ ಇವು ಟಿಪ್ಪುವಿನ ಆಸ್ಥಾನ ಚರಿತ್ರಕಾರರ ಕೊನೆಯ ಚೀರಾಟವೂ ಅಲ್ಲ. ಟಿಪ್ಪು ಮರಣ ಹೊಂದಿದ್ದು 1799ರಲ್ಲಿ. ಹಾಗಾಗಿ ಈ ರೀತಿಯ ಹೇಳಿಕೆ, ಅದರಲ್ಲೂ ಭಾರತದ ಸ್ವಾತಂತ್ರ‍್ಯವೇ ಒಂದೂವರೆ ಶತಮಾನದಷ್ಟು ಮುಂದಕ್ಕೆ ಹೋಯಿತು ಎನ್ನುವಂತಹ ಹೇಳಿಕೆ ನೀಡಲು ಇಷ್ಟು ದೀರ್ಘ ಕಾಲ ಇವರ ಪೈಕಿ ಯಾರೂ ಬದುಕಿರಲು ಸಾಧ್ಯವಿಲ್ಲ.

ಈ ಮೇಲಿನ ಹೇಳಿಕೆಗಳನ್ನು ಬರೆದದ್ದು ಹಾಗೂ ಪ್ರಕಟಿಸಿದ್ದು ಬಿಜೆಪಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೆ.ಆರ್. ಮಲ್ಕಾನಿ ಅವರು. ಇವರು ಬಿಜೆಪಿಯ ಉಪಾಧ್ಯಕ್ಷರಾಗಿ ಹಲವಾರು ವರ್ಷ ಕಾರ್ಯ ನಿರ್ವಹಿಸಿದ್ದರು. ಈ ಮೇಲಿನ ಹೇಳಿಕೆಗಳನ್ನು ನೀವು ಎಲ್ಲೆಡೆಯೂ ಲಭ್ಯವಿರುವ ಅವರ ಕೃತಿ ‘ಇಂಡಿಯಾ ಫಸ್ಟ್’ನ (ಪ್ರ: ಓಶನ್ ಬುಕ್ಸ್, 2019) 204ರಿಂದ 207ರವರೆಗಿನ ಪುಟಗಳಲ್ಲಿ ಕಾಣಬಹುದು.

ಕೇವಲ್ ರಾಮ್ ರತನ್ ಕುಮಾರ್ ಮಲ್ಕಾನಿ ಅವರೇನೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಳಗಿನ ರಹಸ್ಯ ಬಂಡುಕೋರರೇನಲ್ಲ. ಅವರು ಆರ್.ಎಸ್.ಎಸ್.ನ ಅತಿ ಮುಖ್ಯ ಚಿಂತಕರಲ್ಲಿ ಒಬ್ಬರಾಗಿದ್ದರು ಹಾಗೂ ಆ ಸಂಘಟನೆಯ ಮಾಧ್ಯಮ ವ್ಯಕ್ತಿಯೂ ಆಗಿದ್ದರು.

ಮಲ್ಕಾನಿ ಅವರು 1940ರ ದಶಕದಲ್ಲಿ ‘ದಿ ಹಿಂದೂ ಸ್ಥಾನ್ ಟೈಮ್ಸ್’ನಲ್ಲಿ ಕೆಲಕಾಲ ಕೆಲಸ ಮಾಡಿದ್ದರು (ಅದೇ ಸಮಯದಲ್ಲಿ ಅವರು ‘ಆರ್ಗನೈಸರ್’ ವಾರ ಪತ್ರಿಕೆಗೂ ಬರೆಯುತ್ತಿದ್ದರು). ಆನಂತರದಲ್ಲಿ ಅವರು ಪೂರ್ಣಾವಧಿಗೆ ಹಿಂದುತ್ವದ ತೆಕ್ಕೆಗೆ ಬಂದರು. ಆರ್.ಎಸ್.ಎಸ್.ನ ದನಿಯಾಗಿದ್ದ ಆರ್ಗನೈಸರ್’ಗೆ ಸುಮಾರು 35 ವರ್ಷದಷ್ಟು ದೀರ್ಘಕಾಲ ಸಂಪಾದಕರಾಗಿದ್ದು ಇವರೊಬ್ಬರೇ. ಇದಲ್ಲದೆ ಅವರು ಬಹುತೇಕ ಅಷ್ಟೇ ಸಮಯ ‘ಆರ್ಗನೈಸರ್’ನ ಹಿಂದಿ ಆವೃತ್ತಿ ‘ಪಾಂಚಜನ್ಯ’ದ ಸಂಪಾದಕ ರಾಗಿಯೂ ಕೆಲಸ ಮಾಡಿದ್ದರು. ಇದಲ್ಲದೆ, ‘ಮದರ್ ಲ್ಯಾಂಡ್’ನ ಸಂಪಾದಕರೂ ಆಗಿದ್ದರು. ಆರ್.ಎಸ್.ಎಸ್.ನಲ್ಲಿ ಅನಂತರ ಯಾರೂ ಅಷ್ಟು ಎತ್ತರ ಏರಿಲ್ಲ.
1980ರಲ್ಲಿ ಹಾಗೂ 1990ರ ದಶಕದ ಬಹುತೇಕ ಮಾಧ್ಯಮಗಳು ಇವರನ್ನು ಬಿಜೆಪಿಯ ಮುಖ್ಯ ಇಂಗ್ಲಿಷ್ ವಕ್ತಾರ ಎಂದೇ ಗುರುತಿಸಿದ್ದವು.

ಮಲ್ಕಾನಿಯವರ ಈ ಆರ್.ಎಸ್.ಎಸ್. ಹೆಗ್ಗುರುತಿನ ಜೊತೆ ಬಿ.ಸಿ. ನಾಗೇಶ್ ಅವರನ್ನು ಹೋಲಿಸಿ ನೋಡಿದರೆ ಅವರು ತೀರಾ ಕೃಶವಾಗಿ ತೋರುತ್ತಾರೆ. ಅಷ್ಟಕ್ಕೂ ನಾಗೇಶ್ ಎಂಬುವವರು ಯಾರು? ಅವರು ಇತ್ತೀಚೆಗೆ ಸೋತು ಸುಣ್ಣವಾದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದವರು. ರಾಜ್ಯದ ಪಠ್ಯಪುಸ್ತಕಗಳಿಂದ ಟಿಪ್ಪು ಹಾಗೂ ಭಗತ್ ಸಿಂಗ್‌ರನ್ನು ಕಿತ್ತು ಹಾಕಲು ನೇತೃತ್ವ ವಹಿಸಿದ್ದವರು.

ಮಲ್ಕಾನಿ ಅವರು ಟಿಪ್ಪು ಬಗ್ಗೆ ಬರೆದ ಲೇಖನವನ್ನು ಒಳಗೊಂಡ ಪುಸ್ತಕಕ್ಕೆ ಹಿಂದುತ್ವದ ಹೀರೊ ಎಲ್.ಕೆ. ಅಡ್ವಾಣಿ ಅವರೇ ಮುನ್ನುಡಿ ಬರೆದಿದ್ದರು. ಭಾರತದ ಉಪ ಪ್ರಧಾನಿಯಾಗಿದ್ದ ಅಡ್ವಾಣಿ ಅವರು ಮಲ್ಕಾನಿ ಅವರನ್ನು ‘ಮಹಾನ್ ಪತ್ರಕರ್ತ’ ಎಂದೇ ಬಣ್ಣಿಸುತ್ತಿದ್ದರು. ‘ಮಲ್ಕಾನಿ ಅವರಿಗೆ ಪತ್ರಿಕೋದ್ಯಮ ಎನ್ನುವುದು ಬರೀ ಉದ್ಯೋಗವಲ್ಲ. ಅದು ಒಂದು ಸಾಮಾಜಿಕ ಬದ್ಧತೆ’ ಎಂದಿದ್ದರು. ಅಷ್ಟೇ ಅಲ್ಲದೆ, ‘ನಾನು ಅವರ ಮಾರ್ಗದರ್ಶನದಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದಿದ್ದೆ’ ಎಂದಿದ್ದರು.

ಮಲ್ಕಾನಿ ಅವರ ಬಗ್ಗೆ ಗೌರವದಿಂದ ಮಾತನಾಡಿದಂತೆ ಬಿ.ಸಿ. ನಾಗೇಶ್ ಅವರ ಬಗ್ಗೆ ಅಥವಾ ಈ ಪಠ್ಯ ಪುಸ್ತಕ ತಿರುಚಲು ಹೊರಟ ‘ತುಕಡೆ ತುಕಡೆ ಗ್ಯಾಂಗ್’ ಬಗ್ಗೆ ಯಾರಾದರೂ ಯಾವಾಗಲಾದರೂ ಈ ರೀತಿ ಬರೆದದ್ದಾಗಲಿ, ಮಾತನಾಡಿದ್ದನ್ನಾಗಲಿ ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಆರ್.ಎಸ್.ಎಸ್. ಸಹ ಎಲ್ಲಿಯೂ ಮಲ್ಕಾನಿ ಅವರನ್ನು ನಿರಾಕರಿಸಿಲ್ಲ. ಬದಲಿಗೆ, ಕಳೆದ ವರ್ಷ ಡಿಸೆಂಬರ್ 18- ಮಲ್ಕಾನಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ- ದೆಹಲಿಯ ಭಾರತ ಸಮೂಹ ಮಾಧ್ಯಮ ಸಂಸ್ಥೆಯಲ್ಲಿ ಹಲವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನೆರೆದಿದ್ದರು. ಅವರಲ್ಲಿ ಆರ್ಗನೈಸರ್‌ನ ಈಗಿನ ಸಂಪಾದಕ, ಪತ್ರಕರ್ತ ಪೀಳಿಗೆಯೂ ಇತ್ತು. ಬಿಜೆಪಿಯ ವಕ್ತಾರ, ಖ್ಯಾತ ಪತ್ರಕರ್ತ ಸ್ವಪನ್ ದಾಸ್ ಗುಪ್ತ ಹಾಗೂ ಆರ್ಗನೈಸರ್‌ನ ಸಂಪಾದಕ ಪ್ರಫುಲ್ಲ ಕೇತ್ಕರ್ ಅವರೂ ಇದ್ದರು. ಹಾಗಿದ್ದಾಗ, ಖ್ಯಾತ ಪತ್ರಕರ್ತ ಹಾಗೂ ಇತಿಹಾಸ ತಜ್ಞ ಎಂದೇ ಹಿಂದುತ್ವದ ವಲಯದಲ್ಲಿ ಹೆಸರಾಗಿರುವ ಮಲ್ಕಾನಿ ಅವರು ಇಂಡಿಯಾ ಫಸ್ಟ್ ನಲ್ಲಿ ಬರೆದಂತಹ ಲೇಖನವನ್ನು ಮರೆಯಲು ಹೇಗೆ ಸಾಧ್ಯ?

ಈಗ ವಾಪಸ್ 1990ಕ್ಕೆ ಹೋಗೋಣ.
ಆಗತಾನೆ ನಟ, ನಿರ್ದೇಶಕ ಸಂಜಯ್ ಖಾನ್ ಅವರ ‘ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಪ್ರಸಾರಕ್ಕೆ ಸಜ್ಜಾಗಿತ್ತು. 1990ರ ಫೆಬ್ರುವರಿಯಲ್ಲಿ ದೂರದರ್ಶನವು ಆ ಧಾರಾವಾಹಿಯ ಮೊದಲ ಕಂತನ್ನು (ಒಟ್ಟು 60 ಕಂತು) ಪ್ರಸಾರ ಮಾಡಿತು. ಪ್ರೇಕ್ಷಕರು ಅದನ್ನು ಮೆಚ್ಚಿಕೊಂಡಿದ್ದರು. ಈ ಧಾರಾವಾಹಿ ತೆಲುಗು, ಬಂಗಾಳಿ ಮತ್ತು ತಮಿಳಿಗೂ ಡಬ್ ಆಯಿತು. ಮುಂದಿನ ದಶಕದಲ್ಲಿ ಅದು ಇನ್ನೂ ಹಲವಾರು ಚಾನೆಲ್‌ಗಳಲ್ಲಿ ಪ್ರಸಾರವಾಯಿತು. ಈ ಧಾರಾ ವಾಹಿಯ ಸಬ್‌ಟೈಟಲ್ ಹೊತ್ತ ಹಾಗೂ ಡಬ್ ಆದ ಆವೃತ್ತಿಯನ್ನು ಬ್ರಿಟನ್, ಇಂಡೊನೇಷ್ಯಾ, ಮಾರಿಷಸ್ ಸೇರಿ ವಿವಿಧೆಡೆ ಪ್ರದರ್ಶಿಸಲಾಯಿತು. ಟಿಪ್ಪುವನ್ನು ರಾಕ್ಷಸೀಕರಿಸಿ, ಹಿಂದೂಗಳ ನರಹಂತಕನಂತೆ ತೋರಿಸದ ಈ ಧಾರಾವಾಹಿಯ ವಿರುದ್ಧ ಪ್ರತಿರೋಧ ಕಂಡು ಬಂದಿತು. ಒಂದಿಷ್ಟು ಗದ್ದಲದ ಪ್ರತಿಭಟನೆಗಳೂ ನಡೆದವು.
ಈ ಧಾರಾವಾಹಿಯ ಕೆಲವೊಂದು ಕಂತನ್ನು ವೀಕ್ಷಿಸಿ, ತೀರ್ಮಾನ ನೀಡುವಂತೆ ಪಕ್ಷದ ನಾಯಕರೂ ಸೇರಿದಂತೆ ಕೆಲವರು ಮಲ್ಕಾನಿ ಅವರನ್ನು ಕೋರಿದರು. ಇಂಡಿಯಾ ಫಸ್ಟ್ ಕೃತಿಯಲ್ಲಿ ನಾನು ಉದ್ಧ ರಿಸಿರುವ ಟಿಪ್ಪು ಸುಲ್ತಾನನ ಹಿರಿಮೆ ಭಾಗವನ್ನು ಅವರು ಯಾವಾಗ ಬರೆದರು ಎಂಬ ಬಗ್ಗೆ ವಿವರಗಳಿಲ್ಲ. ಆದರೆ ಅದಕ್ಕೆ ಅಡ್ವಾಣಿ ಅವರು 2002ರ ಜನವರಿ 26ರಲ್ಲಿ ಮುನ್ನುಡಿ ಬರೆದಿದ್ದರು (ಅಡ್ವಾಣಿ ಅವರು ಉಪಪ್ರಧಾನಿಯಾಗುವ ಆರು ತಿಂಗಳ ಮೊದಲು). ಲೇಖಕರ ಪ್ರಸ್ತಾವನೆಯಲ್ಲಿ 2002 ಎಂದಷ್ಟೇ ನಮೂದಾಗಿದೆ. ಹಾಗಾಗಿ, ಇದನ್ನು 1990ರಿಂದ 2001ರ ಅಂತ್ಯದ ನಡುವಿನ ಯಾವುದೋ ಸಮಯದಲ್ಲಿ ಬರೆದಿದ್ದಾರೆ ಎಂಬುದು ಗೊತ್ತಾಗುತ್ತದೆ.

1990ರ ಆರಂಭದ ಭಾಗದಲ್ಲಿ ನಾನು ಹಾಗೂ ನನ್ನ ಗೆಳೆಯರು ವಿಶ್ವ ವ್ಯಾಪಾರ ಸಂಘಟನೆ ವಿರೋಧಿ ಚಳವಳಿ ಸಂಬಂಧ ಮಲ್ಕಾನಿ ಅವರ ಬಳಿ ಹೋಗಿದ್ದೆವು. ಬಿಜೆಪಿಯ ಬಹುತೇಕರು (1996ರವರೆಗೂ ಬಿಜೆಪಿ ವಿರೋಧ ಪಕ್ಷವಾಗಿತ್ತು) ಡಂಕಲ್ ಪ್ರಸ್ತಾವದ ಕಟು ಟೀಕಾಕಾರರಾಗಿದ್ದರು. ವಿಶ್ವ ವ್ಯಾಪಾರ ಸಂಘಟನೆಯಿಂದ ಭಾರತ ಹಾಗೂ ಮೂರನೇ ಜಗತ್ತಿನ ರಾಷ್ಟ್ರಗಳ ಮೇಲೆ ಎಂತಹ ಪರಿಣಾಮ ಆಗುತ್ತದೆ ಎಂಬುದರ ಬಗ್ಗೆ ಬಿರುಸಿನ ದಾಳಿ ನಡೆಸುತ್ತಿದ್ದರು. ಮಲ್ಕಾನಿ ಅವರು ಪಕ್ಷದ ಇತರರಿಗಿಂತ ಭಿನ್ನವಾಗಿ ತಮ್ಮ ನಿಲುವಿಗೆ ಎಂದೆಂದಿಗೂ ಬದ್ಧರಾಗಿದ್ದರು. ಅವರು ಉದಾರವಾದಿ ವ್ಯಕ್ತಿಯಲ್ಲ. ಹಿಂದೂ ಮೂಲಭೂತವಾದಿ. ‘ಮನುಸ್ಮÈತಿ ಎನ್ನುವುದು ಮಾನವ ಕುಲದ ಮಹತ್ವದ ಕೃತಿಗಳಲ್ಲೊಂದು’ ಎಂದು ಸಾರಿದರು. ಮಲ್ಕಾನಿ ಅವರ ಜತೆಗಿನ ಹೀಗೊಂದು ಭೇಟಿಯಲ್ಲಿ ಈ ಕಡುಸ್ವಯಂಸೇವಕರು ತಾನು ಟಿಪ್ಪು ಧಾರಾವಾಹಿಯನ್ನು ವೀಕ್ಷಿಸುತ್ತಿರುವುದಾಗಿ ಹೇಳಿದ್ದರು. 2002ರಲ್ಲಿ ಪ್ರಕಟವಾದ ಇವರ ಪುಸ್ತದಲ್ಲಿದ್ದ ಟಿಪ್ಪು ಸುಲ್ತಾನನ ಹಿರಿಮೆ ಕುರಿತ ಲೇಖನವು ಈ ಧಾರಾವಾಹಿಯ ಬಗ್ಗೆ ಇವರು ಮಾಡಿದ ತನಿಖೆಯ ಪರಿಣಾಮವೂ ಇರಬಹುದು (ಈ ಲೇಖನ ಪ್ರತ್ಯೇಕವಾಗಿ ಆ ಮೊದಲು ಬೇರೆಡೆ ಪ್ರಕಟವಾಗಿರಲೂಬಹುದು).

ಮಲ್ಕಾನಿ ಅವರ ಈ ನಿಲುವನ್ನು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ, ಕೆಲವೊಮ್ಮೆ ತಿಳಿಯದೆಯೇ ಕಲುಷಿತಗೊಳಿಸುವ ಪ್ರಯತ್ನಗಳು ನಡೆದಿದ್ದವು. ಉದಾಹರಣೆಗೆ, ಮಲ್ಕಾನಿ ಅವರು ಅಭಿವ್ಯಕ್ತಿ ಸ್ವಾತಂತ್ರ‍್ಯದಲ್ಲಿ ನಂಬಿಕೆ ಇದ್ದವರಾದ ಕಾರಣ ಅಂತಿಮವಾಗಿ ಈ ಧಾರಾವಾಹಿಯನ್ನು ಒಪ್ಪಿದ್ದರು. ಈ ಧಾರಾವಾಹಿ ಕಾಲ್ಪನಿಕ ಕೃತಿ ಆಧರಿಸಿದ ಕಾರಣಕ್ಕೂ ಅವರು ಆ ನಿಲುವು ತಳೆದರು ಎಂಬುದೂ ಒಂದಾಗಿತ್ತು. ಬೇರೆ ಮಾತಿನಲ್ಲಿ ಹೇಳುವುದಾದರೆ, ಮಲ್ಕಾನಿ ಅವರು ಟಿಪ್ಪುವನ್ನು ತಿರಸ್ಕರಿಸಿದ್ದರು, ಆದರೆ ಕಲಾತ್ಮಕ ಅಭಿವ್ಯಕ್ತಿಯನ್ನು ಬೆಂಬಲಿಸಿದ್ದರು. ನಿಜವಾದ ಟಿಪ್ಪುವನ್ನು ಬಯಲಿಗೆಳೆಯುವ ಲೇಖನ ಬರೆಯುವುದಾಗಿ ಭರವಸೆ ನೀಡಿದ್ದರು ಎಂಬುದೂ ಆಗಿತ್ತು.

ಆದರೆ, ಈ ಕೃತಿಯಲ್ಲಿ ಮಲ್ಕಾನಿ ಅವರು ಟಿಪ್ಪು ಬಗ್ಗೆ ಹರಿಸಿರುವ ಪ್ರಶಂಸೆಯ ಹೊಳೆ ಈ ಎಲ್ಲ ಹೇಳಿಕೆಗಳನ್ನೂ ಕೊಚ್ಚಿ ಹಾಕಿದೆ. ಅಲ್ಲದೆ, ಟಿಪ್ಪು ಮಾತ್ರವೇ ‘ಬ್ರಿಟಿಷರ ವಿರುದ್ಧ ಹೋರಾಡುತ್ತಾ ಮಡಿದ’ ಭಾರತದ ಏಕೈಕ ರಾಜ ಎಂದು ‘ನಿಜ ಟಿಪ್ಪು’ವನ್ನು ಬಣ್ಣಿಸಿದ್ದರು. ಅದರಲ್ಲೂ ಈ ಹೇಳಿಕೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಂದದ್ದು ಎಂಬುದು ಬಹಳಷ್ಟೇ ಇರಿಸು ಮುರಿಸು ಉಂಟು ಮಾಡಿರಬೇಕು. ಇವರಿಂದ ಟಿಪ್ಪು ವಿರೋಧಿ ಹೇಳಿಕೆ ಪಡೆದು, ಈ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳ ಬಹುದಿತ್ತು.

ವಾಸ್ತವವೆಂದರೆ, ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ 2003ರಲ್ಲಿ ನಿಧನರಾದ ಮಲ್ಕಾನಿ ಅವರು ಸ್ಪಷ್ಟ ಚಿಂತನೆ ಮತ್ತು ನೇರ ನುಡಿಯ ವ್ಯಕ್ತಿತ್ವದವರು. ಟಿಪ್ಪು, ಭಗತ್ ಸಿಂಗ್, ಹಿಜಾಬ್ ಹಾಗೂ ಮತ್ತಿತರ ವಿಷಯವಾಗಿ ಕರ್ನಾಟಕದಲ್ಲಿ ಅನಗತ್ಯ ಗಲಭೆಗಳನ್ನು ಸೃಷ್ಟಿಸಿದ ಗುಂಪಿನಂತಲ್ಲ.

ಟಿಪ್ಪು ಬಗ್ಗೆ ಅವರು ಬಹಳಷ್ಟು ಓದಿಕೊಂಡಿದ್ದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪಾಲಿಗೆ ಕಂಟಕಪ್ರಾಯ ಎನಿಸಿದ್ದ ಟಿಪ್ಪು ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಟಿಪ್ಪುವಿನ ಬಗ್ಗೆ ಅವರು ಲೇಖನವನ್ನು ಅಂತ್ಯಗೊಳಿಸಿದ ರೀತಿ ಹೃದಯಸ್ಪರ್ಶಿಯಾಗಿದೆ.

ಟಿಪ್ಪು ಅಸ್ತಂಗತವಾದ ಸಂಗತಿಯ ನ್ನು ತಿಳಿದ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಸಂತೋಷ ಕೂಟ ಏರ್ಪಡಿಸಿ, ಇನ್ನಿಲ್ಲದಂತೆ ಹರ್ಷಿಸಿದ್ದ. ಆ ಸಂದರ್ಭವನ್ನು ಆಧಾರವಾಗಿ ಇಟ್ಟುಕೊಂಡು ಮಲ್ಕಾನಿ ಅವರು ಹೀಗೆ ಬರೆಯುತ್ತಾರೆ… ‘ಆತ ಬಯಸಿದ್ದರೆ, ಹಿಂದಿನ ಕೆಲ ಅರಸರಂತೆ, ಬ್ರಿಟಿಷರ ಅಡಿಯಾಳಾಗಿ ತನ್ನ ಅರಸುತನವನ್ನು ಉಳಿಸಿಕೊಳ್ಳಬಹುದಾಗಿತ್ತು. ಅಂದು ಅವನು ಹಾಗೆ ಮಾಡಿದ್ದೇ ಆಗಿದ್ದಲ್ಲಿ, ಇಂದು ಆತನ ಮರಿ, ಗಿರಿ ಮಕ್ಕಳು ಕೊಲ್ಕತ್ತಾದ ರಸ್ತೆಗಳಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಾ ಬದುಕು ಸವೆಸಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕುತ್ತಿರಲಿಲ್ಲ’. ‘ಗೌರವ ಕಳೆದುಕೊಂಡು ಬದುಕುವುದಕ್ಕಿಂತಲೂ ಸಾವು ಆತನ ಆಯ್ಕೆಯಾಗಿತ್ತು.’ ‘18ನೇ ಶತಮಾನದ ರಾಜರುಗಳ ನಡುವೆ ಈತ ಏಕಾಂಗಿಯಾಗಿ ವಿದೇಶಿಯರ ವಿರುದ್ಧ ಸೆಣಸಾಡುತ್ತಾ ಪ್ರಾಣಬಿಟ್ಟ. ಟಿಪ್ಪುವಿಗೆ ವಂದನೆ ಸಲ್ಲಿಸದೆ ಸ್ವತಂತ್ರ ಭಾರತಕ್ಕೆ ಬೇರಾವುದೇ ಆಯ್ಕೆಯಿಲ್ಲ’.

ಕೃಪೆ: ಪ್ರಜಾವಾಣಿ