ಯೋಗಿಗಳ ಸೇವೆಯನ್ನು ತಡೆಯುವವರು ಶಿಕ್ಷಿಸಲ್ಪಡುವರು- ಯೋಗಿ ಆದಿತ್ಯನಾಥ್; ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಕೇಸರಿ ಬಟ್ಟೆ ಒಪ್ಪುವುದಿಲ್ಲ- ಪ್ರಿಯಾಂಕಾ

0
742

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 31: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪೊಲೀಸರ ಕ್ರಮಗಳನ್ನು ಮುಂದಿಟ್ಟು ಉತ್ತರಪ್ರದೇಶ ಮುಖ್ಯಮಂತ್ರಿಯನ್ನು ಟೀಕಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಉತ್ತರ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸನ್ಯಾಸಿಯ ನಿರಂತರ ಜನಕಲ್ಯಾಣ ಪರಿಶ್ರಮಗಳನ್ನು ತಡೆಯುವವರು ಶಿಕ್ಷಿಸಲ್ಪಡುವರು ಎಂದು ಟ್ವೀಟ್ ಮಾಡಿದ್ದಾರೆ. ಓಲೈಕೆ ರಾಜಕೀಯಕ್ಕೆ ಇಳಿದವರಿಗೆ ಸೇವೆಯೆಂಬ ಆಶಯವನ್ನು ಆರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಯೋಗಿ ಟೀಕಿಸಿದರು. ಭಗ್ವಾ ಮೇಂ ಲೋಕ್ ಕಲ್ಯಾಣ್ (ಸಾರ್ವಜನಿಕ ಒಳಿತು ಕೇಸರಿಯಲ್ಲಿ) ಎಂಬ ಹೀಂದಿ ಹ್ಯಾಷ್ ಟ್ಯಾಗ್ ಮೂಲಕ ಯೋಗಿ ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕ ಸೇವೆಯ ಒಬ್ಬ ಸನ್ಯಾಸಿಯ ನಿರಂತರ ಪರಿಶ್ರಮಗಳನ್ನು ತಡೆಯುವವರು ಶಿಕ್ಷಿಸಲ್ಪಡುವರು. ರಾಜಕೀಯವು ಪರಂಪರೆಯಲ್ಲಿ ಸಿಕ್ಕಿದವರಿಗೋ ಯಾರನ್ನೋ ಓಲೈಸಲಿಕ್ಕಾಗಿ ರಾಜಕೀಯ ಮಾಡುವವರಿಗೋ ಸೇವೆಯ ಅರ್ಥ ಆಗುವುದಿಲ್ಲ ಎಂದು ಯೋಗಿ ಟ್ವೀಟ್ ಮಾಡಿದರು. ಸೋಮವಾರ ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಂಕಾ ಗಾಂಧಿ ಆದಿತ್ಯನಾಥ್‍ರನ್ನು ತೀವ್ರವಾಗಿ ಟೀಕಿಸಿದ್ದರು. ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಕೇಸರಿ ಬಟ್ಟೆ ಒಪ್ಪುವುದಿಲ್ಲ ಎಂದು ಹೇಳಿದ್ದರು. ಅಕ್ರಮಕ್ಕೂ, ಶತ್ರುತ್ವಕ್ಕೂ ಪ್ರತೀಕಾರಕ್ಕೂ ಭಾರತದಲ್ಲಿ ಸ್ಥಾನವಿಲ್ಲ ಎಂದು ಪ್ರಿಯಾಂಕಾ ಹೇಳಿದ್ದರು.