ಸುಪ್ರೀಂ ಕೋರ್ಟ್: ಮಾನವ ನಿರ್ಮಿತ ಕಾನೂನಿನ ಅಲ್ಪಾಯುಷ್ಯವನ್ನು ಒಪ್ಪಿಕೊಂಡ ಅಪ್ಪ- ಮಗ

0
1703

ಏ ಕೆ ಕುಕ್ಕಿಲ

ಕಾನೂನುಗಳು ಎಲ್ಲಿಯವರೆಗೆ ಊರ್ಜಿತ ಮತ್ತು ಅವುಗಳ ಆಯುಷ್ಯ ಎಷ್ಟು ದೀರ್ಘ ಅನ್ನುವ ಜಿಜ್ಞಾಸೆಯೊಂದಕ್ಕೆ ಸುಪ್ರೀಂ ಕೋರ್ಟಿನಲ್ಲಾಗುತ್ತಿರುವ ಬೆಳವಣಿಗೆಗಳು ಬಾಗಿಲು ತೆರೆದಿವೆ ಎಂದೇ ಅನಿಸುತ್ತದೆ. 1985 ರಲ್ಲಿ ನ್ಯಾಯಮೂರ್ತಿ ವೈ ವಿ ಚಂದ್ರಚೂಡ್ ಅವರು ಭಾರತೀಯ ದಂಡ ಸಂಹಿತೆಯ 497 ನೇ ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರಲ್ಲದೆ, ಆ ಮೂಲಕ ಪರಸಂಗವನ್ನು ಅಪರಾಧ ಎಂದು ತೀರ್ಪಿತ್ತಿದ್ದರು. ಇದಾಗಿ 33 ವರ್ಷಗಳ ಬಳಿಕ ನಿನ್ನೆ ಅವರ ಮಗ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅಪ್ಪನ ತೀರ್ಪನ್ನು ತಿರಸ್ಕರಿಸುವ ಮೂಲಕ ಪರಸಂಗ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟರು. ಖಾಸಗಿತನದ ಹಕ್ಕಿನ ಕುರಿತೂ ಈ ಅಪ್ಪ ಮತ್ತು ಮಗ ತದ್ವಿರುದ್ಧ ನಿಲುವನ್ನು ತಾಳಿದರು. ಈ ವಿಷಯದಲ್ಲಿ ಅಪ್ಪ ಈ ಹಿಂದೆ ಕೊಟ್ಟಿದ್ದ ತೀರ್ಪಿನ ವಿರುದ್ಧ ಮಗ ಇತ್ತೀಚಿಗೆ ತೀರ್ಪು ಕೊಟ್ಟಿದ್ದರು. ನಮಾಜ್ ಮಾಡುವುದಕ್ಕೆ ಮಸೀದಿಯೇ ಬೇಕೆಂದಿಲ್ಲ ಎಂಬ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 1994 ರಲ್ಲಿ ನೀಡಿತ್ತು. ಅದಾಗಿ 24 ವರ್ಷಗಳ ಬಳಿಕ ನಿನ್ನೆ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಮರು ಅವಲೋಕನ ನಡೆಯಿತು. ಬಹುಶಃ, ಇನ್ನೊಂದು ಹತ್ತು ವರ್ಷ ಕಳೆದಾಗ ಈ ಪರಸಂಗದ ತೀರ್ಪು, ಆಧಾರ್ ಕಾರ್ಡ್ ನ ತೀರ್ಪು, ಶಬರಿ ಮಲೆ ತೀರ್ಪು, ಬಾಬರಿ ಮಸೀದಿ ತೀರ್ಪು, ಸಲಿಂಗರತಿಯ ತೀರ್ಪು ಎಲ್ಲವೂ ಬದಲಾಗಬಹುದೋ ಏನೋ? ಆ ಕಾಲದ ನ್ಯಾಯಮೂರ್ತಿಗಳ ಮನಸ್ಥಿತಿಯನ್ನು ಅನುಸರಿಸಿ ತೀರ್ಪುಗಳು ಉಲ್ಟಾ ಪಲ್ಟಾ ಆಗಲಾರದು ಅನ್ನುವ ಹಾಗಿಲ್ಲ.

ಅಂದೂ ಇಂದೂ ಸಂವಿಧಾನ ಒಂದೇ

ಆದರೆ, ಅದನ್ನು ಅರ್ಥೈಸುವ ವಿಧಾನ ಮಾತ್ರ ಬೇರೆ ಬೇರೆ. ಹೀಗಿರುವಾಗ ಯಾವ ತೀರ್ಪನ್ನೂ ದೀರ್ಘಾಯುಷಿ ಎಂದು ಹೇಳುವಂತಿಲ್ಲ.