ಮನುಷ್ಯನಿಗೆ ಒಂದು ಕಣಿವೆ ಬಂಗಾರ ಸಿಕ್ಕಿದರೆ, ಇನ್ನೊಂದಕ್ಕಾಗಿ ಆಸೆಪಡುವನು..

0
828

ಪಂಚತಾರಾ ಹೊಟೇಲಿನಲ್ಲಿ ತಂಗಿದ್ದ ಓರ್ವ ಮಿಲಿಯಾಧಿಪತಿ ರಾತ್ರಿ ನಿದ್ದೆ ಬಾರದೆ ಹೊಟೇಲಿನ ವರಾಂಡದಲ್ಲಿ ಅಡ್ಡಾಡುತ್ತಿದ್ದ. ಆಗ ಆತನಿಗೆ ದೂರದ ಅಂಗಡಿಯ ಚಾವಡಿಯಲ್ಲಿ ಓರ್ವ ವ್ಯಕ್ತಿ ಮಲಗಿರುವುದು ಗೋಚರಿಸಿತು. ಆತನ ಬಗ್ಗೆ ಮಾಹಿತಿ ಪಡೆದಾಗ ಆತ ಓರ್ವ ಕೂಲಿ ಕಾರ್ಮಿಕನಾಗಿದ್ದ. ರಾತ್ರಿ ಎಂಟೂವರೆ ಗಂಟೆಗೆ ಬಂದು ಒಂದರ್ಧ ತಾಸು ಹಾಡುತ್ತಾ ಬೀಡಿ ಸೇದುತ್ತಾ ಕಳೆಯುತ್ತಾನೆ. ಅನಂತರ ಅಂಗಡಿಯ ಛಾವಣಿಯಲ್ಲಿದ್ದ ಚಾಪೆಯನ್ನು ಬಿಡಿಸಿ ಮಲಗಿ ನಿದ್ರಿಸುತ್ತಾನೆ. ಬೆಳಿಗ್ಗೆ ಆ ಮಿಲಿಯಾಧಿಪತಿ ಎದ್ದು ನೋಡಿದಾಗ ಆತ ಸುಖ ನಿದ್ರೆಯಲ್ಲಿರುವುದು ಕಾಣುತ್ತದೆ. ಆತ ಬೆಳಿಗ್ಗೆ ಐದು ಗಂಟೆಗೆದ್ದು ಹೊರಗೆಲ್ಲಿಗೋ ಹೋಗಿ ಪ್ರಾತಃ ವಿಧಿಗಳನ್ನು ಮುಗಿಸಿ ಮರಳುತ್ತಾನೆ.ತರುವಾಯ ಚಾಪೆಯನ್ನು ಮಡಚಿಟ್ಟು ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಾನೆ.

ಮಿಲಿಯಧಿಪತಿಯು ತಾನು ಕಂಡದ್ದನ್ನು ತನ್ನ ನೆರೆಯಲ್ಲಿರುವ ಮಿತ್ರನಿಗೆ ತಿಳಿಸುತ್ತಾನೆ. ತಾನೋರ್ವ ಶ್ರೀಮಂತನಾಗಿದ್ದರೂ ತನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ಆ ವ್ಯಕ್ತಿ ಬಡವನಾಗಿದ್ದರೂ ಕೂಲಿಯಾ ಳಾಗಿದ್ದರೂ ಸುಖ ನಿದ್ರೆ ಮಾಡುತ್ತಾನೆ ಎಂದು ಹೇಳುತ್ತಾನೆ.

ಆತನ ಮಾತಿಗೆ ಮಿತ್ರನು ನಗುತ್ತಾ, ನಾನೀ ಸಮಸ್ಯೆಯನ್ನು ಬಗೆಹರಿಸುತ್ತೇನೆ. ನನಗೆ 95 ರೂ. ಕೊಡಿ ಎಂದು ಹೇಳುತ್ತಾನೆ. ಆತ ಕೊಟ್ಟ 95 ರೂಪಾಯಿಯನ್ನು ಯಾರಿಗೂ ಕಾಣದಂತೆ ಮಿತ್ರನು ಆ ಮಡಚಿಟ್ಟ ಚಾಪೆಯೊಳಗಿರಿಸುತ್ತಾನೆ. ಕೂಲಿಯಾಳು ರಾತ್ರಿ ಮಲಗಲು ಬಂದು ಚಾಪೆ ಬಿಡಿಸಿದಾಗ ಅವನಿಗೆ ರೂ. 95 ಸಿಕ್ಕಿತು. ಆತ ಪದೇ ಪದೇ ಅದನ್ನು ಎಣಿಸಿ ನೋಡಿದನು. ಜೀವಮಾನದಲ್ಲೆಂದೂ ಇಷ್ಟೊಂದು ದೊಡ್ಡ ಮೊತ್ತ ಅವನ ಕೈಗೆ ಬಂದಿರಲಿಲ್ಲ. ತನ್ನ ಸ್ಥಿತಿಯನ್ನು ನೋಡಿ ದೇವನೇ ಕರುಣಿಸಿದನೆಂದು ಭಾವಿಸಿದನು. ಆ ಬಳಿಕ ಆತ 95ನ್ನು 100 ಮಾಡಲಿಕ್ಕೆ ಪ್ರಯತ್ನಿಸಿದನು.

ಪ್ರತಿದಿನ ಒಂದು ರೂಪಾಯಿ ಉಳಿಸಿ ಭದ್ರವಾಗಿರಿಸ ತೊಡಗಿದ. ಅನಂತರ ಅವನ ಹಾಡು ಮತ್ತು ಸಂತೋಷ ನಿಂತಿತು. ಒಂದೆರಡು ವರ್ಷದ ನಂತರ ಆ ಮಿಲಿಯಾಧಿಪತಿಗೆ ಅದೇ ಹೊಟೇಲಿನಲ್ಲಿ ತಂಗಬೇಕಾಗಿ ಬಂತು. ಅಂದು ಅಂಗಡಿಯ ಚಾವಡಿಯಲ್ಲಿ ಆ ಕಾರ್ಮಿಕ ಕಾಣಸಿಗಲಿಲ್ಲ.

ಆತ ತನ್ನ ಮಿತ್ರನೊಡನೆ ಅವನ ಕುರಿತು ವಿಚಾರಿಸಿದ. ಆತ ಸಂತೋಷದಲ್ಲಿದ್ದಾನೆಯೇ ಎಂದಾತ ಕೇಳಿದ.`ಇಲ್ಲ’ ಮಿತ್ರನ ಉತ್ತರ. ಅಂದು ಆತನಿಗೆ ಯಾವ ಬಯಕೆಯೂ ಇರಲಿಲ್ಲ. ಆತ ಈಗ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾನೆ. ಮದುವೆಯಾಗುವ ಪ್ರಯತ್ನದಲ್ಲೂ ಇದ್ದಾನೆ. ಇದಕ್ಕೆಲ್ಲಾ ಕಾರಣ ನಿಮ್ಮ 95 ರೂಪಾಯಿ. ಅದು ಅವನ ಹಣದಾಸೆಯನ್ನು ಹೆಚ್ಚಿಸಿತು. ಹಣ ಕೂಡಿಡಲು ಪ್ರಯತ್ನಿಸಿದ. ಅದಕ್ಕಾಗಿ ತನ್ನ ಸಂಪೂರ್ಣ ಸಮಯವನ್ನು ವ್ಯಯಿಸಿದ. ಅದರೊಂದಿಗೆ ಅವನ ಸಂತೋಷವೂ ಹೊರಟು ಹೋಯಿತು.ಮನುಷ್ಯನ ಆಸೆಗೆ ಕೊನೆಯೆಂಬುದಿಲ್ಲ.

ಪ್ರವಾದಿ ಮುಹಮ್ಮದ್(ಸ) ಹೇಳಿರುವುದು ಇದನ್ನೇ- ಮನುಷ್ಯನಿಗೆ ಒಂದು ಕಣಿವೆ ಬಂಗಾರ ಸಿಕ್ಕಿದರೆ, ಇನ್ನೊಂದಕ್ಕಾಗಿ ಆಸೆಪಡುವನು.ಅದು ಸಿಕ್ಕಿದರೆ ಮೂರನೆಯದಕ್ಕಾಗಿ ಹಾತೊರೆಯುವನು. ಮನುಷ್ಯನ ಹೊಟ್ಟೆಯನ್ನು ಗೋರಿಯ ಮಣ್ಣು ಮಾತ್ರ ತುಂಬ ಬಲ್ಲುದು.